ಕ್ರೈಂ ನ್ಯೂಸ್ಜಿಲ್ಲೆತುಮಕೂರುಮಧುಗಿರಿ
ಪೋಲೀಸರ ಮೇಲೆ ಹಲ್ಲೆ ಮಾಡಿ ಪಾರಾರಿಯಾಗಲು ಕಳ್ಳನ ಯತ್ನ : ಕಾಲಿಗೆ ಗುಂಡು ಹೊಡೆದು ಆರೋಪಿ ಬಂಧಿಸಿದ ಪೋಲೀಸರು
ಮಧುಗಿರಿ : ವಿವಿಧ ಸರಗಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂದಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮದ್ಯೆ ಪೋಲೀಸರ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹೊಡೆದು ಹೆಡೆಮುರಿ ಕಟ್ಟಿ ಸಿನಿಮೀಯ ರೀತಿಯಲ್ಲಿ ಪೋಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ನಡೆದಿದೆ.
ಮಧುಗಿರಿ ತಾಲೂಕಿನ ಈಜೀ ಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಸೀಮಾಂದ್ರದ ಹಿಂದೂಪುರ ಮೂಲದ ರಿಜ್ವಾನ್ ಬಿನ್ ಬಾಬುಜಾನ್ (34) ಬಂದಿತ ಆರೋಪಿ.
ಏನಿದು ಪ್ರಕರಣ : ಕಳೆದ ಎರಡು ತಿಂಗಳ ಹಿಂದೆ ಪೋಲೀಸರು ಚುನಾವಣಾ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಸಂದರ್ಭವನ್ನು ಬಳಸಿಕೊಂಡು ಆರೋಪಿಗಳಾದ ಚಿನ್ನಾ ಮತ್ತು ರಿಜ್ವಾನ್ ಎಂಬುವವರು ಒಟ್ಟು 15 ಕ್ಕೂ ಹೆಚ್ಚು ನಿರಂತರ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನು ಪೋಲೀಸರು ಬಂಧಿಸಿದ್ದರು.
ಸೋಮವಾರ ಖಚಿತ ಮಾಹಿತಿ ಮೇರೆಗೆ ಎ2 ಆರೋಪಿ ರಿಜ್ವಾನ್ ನನ್ನು ಬಂಧಿಸಲು
ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ,ಸಿಪಿಐ ಹನುನಂತರಾಯಪ್ಪ, ಪಿಎಸ್ ಐ ಶ್ರೀನಿವಾಸ್, ದಾದಪೀರ್, ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ತಂಡ ಬೆಂಗಳೂರಿನ ಹೊಸಕೋಟೆಗೆ ಪೋಲೀಸರು ತೆರಳಿದ್ದರು. ಆರೋಪಿಯನ್ನು ಬಂದಿಸಿ ಕರೆದುಕೊಂಡು ಬರುವಾಗ ಕೊಡಿಗೇನಹಳ್ಳಿ ಹೋಬಳಿಯ ಈಜಿ ಹಳ್ಳಿ ಕ್ರಾಸ್ ಬಳಿ ಬಹಿರ್ದೆಸೆಗೆ ಹೋಗುತ್ತೇನೆ ಎಂದು ಪೋಲಿಸರಿಗೆ ತಿಳಿಸಿದ್ದು, ಪೋಲೀಸರು ವಾಹನ ನಿಲ್ಲಿಸಿ ಬಹಿರ್ದೆಸೆ ಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಈ ಸಮಯವನ್ನು ಬಳಸಿಕೊಂಡ ಆರೋಪಿ ರಿಜ್ವಾನ್ ಬಯಲಿನಲ್ಲಿ ಬಿದ್ದಿದ್ದ ಬಿಯರ್ ಬಾಟಲ್ ನ್ನು ತೆಗೆದುಕೊಂಡು ಪಕ್ಕದಲ್ಲೇ ಇದ್ದ ಪೋಲೀಸ್ ಪೇದೆ ರಮೇಶ್ ಎಂಬುವವರ ಎಡಗೈ ಗೆ ಚುಚ್ಚಿದ್ದು, ಪೇದೆ ನೆಲಕ್ಕೆ ಬಿದ್ದಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಎಚ್ಚೆತ್ತ ಪೋಲೀಸರು ಕೂಡಲೇ ಆರೋಪಿಯನ್ನ ಶರಣಾಗುವಂತೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರು ಸಹ ಆರೋಪಿ ಶರಣಾಗದೇ ಮತ್ತೆ ಪೋಲಿಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಸಿಪಿಐ ಹನುಮಂತರಾಯಪ್ಪ ಆತ್ಮರಕ್ಷಣೆಗಾಗಿ ನೇರವಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂದಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ರಮೇಶ್ ಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆರೋಪಿ ರಿಜ್ವಾನ್ ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಆರೋಪಿಯು ಒಟ್ಟು 18 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಮಧುಗಿರಿ 3, ಮಿಡಗೇಶಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2 ಮಡಕಶಿರಾ 1, ಪಟ್ಟನಾಯಕನಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿದೆ.
ಒಮ್ಮೆ ಎಸ್ಕೇಪ್ ಆಗಿದ್ದ ಆರೋಪಿ : ಕಳೆದ ಎರಡು ತಿಂಗಳ ಹಿಂದೆ ಆರೋಪಿ ರಿಜ್ವಾನ್ ನನ್ನು ಹಿಂದೂಪುರದಲ್ಲಿ ಬಂದಿಸಲು ತೆರಳಿದ್ದ ಪೋಲೀಸರಿಗೆ ದಿಕ್ಕು ತಪ್ಪಿಸಿದ್ದ ಆರೋಪಿ ಒಮ್ಮೆ ಎಸ್ಕೇಪ್ ಆಗಿದ್ದ ಎನ್ನಲಾಗಿದ್ದು, ಎರಡನೇ ಬಾರಿ ಖಚಿತ ಮಾಹಿತಿ ಪಡೆದ ಪೋಲೀಸರು ಆರೋಪಿಯನ್ನು ಬೆನ್ನಟ್ಟಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಹೊಸಕೋಟೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ರಿಜ್ವಾನ್ ನನ್ನು ವಶಕ್ಕೆ ಪಡೆದು ಕರೆದುಕೊಂಡು ಬರುವಾಗ ಕೊಡಿಗೇನಹಳ್ಳಿ ಹೋಬಳಿಯ ಈಜಿಹಳ್ಳಿ ಕ್ರಾಸ್ ಬಳಿ ನಮ್ಮ ಪೇದೆ ರಮೇಶ್ ಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಶರಣಾಗುವಂತೆ ಸೂಚನೆ ನೀಡಿ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರೂ ಸಹ ಬೇಕೆಂದೇ ಮತ್ತೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ನಮ್ಮ ಪೋಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಬ್ಬರೂ ಕಳುವು ಮಾಡಿದ್ದ 480 ಗ್ರಾಂ ಬಂಗಾರದ ಒಡವೆಗಳನ್ನು ಒಂದೇ ಜ್ಯೂಯಲರಿ ಅಂಗಡಿಗೆ ಮಾರಿದ್ದು, ಈಗಾಗಲೇ ಜ್ಯೂಯಲರಿ ಅಂಗಡಿಯಿಂದ ಬಂಗಾರವನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
– ಕೆ.ವಿ. ಅಶೋಕ್, ಎಸ್ಪಿ. ತುಮಕೂರು.