ತುಮಕೂರು : ಮಠಗಳ ಸಶಕ್ತವಾಗಿ ಬೆಳೆಸಿದ ಸುಮಾರು 42 ಲಕ್ಷ ಜನಸಂಖ್ಯೆ ಇರುವ ಲಿಂಗಾಯಿತರು 19 ಬಾರಿ,35 ಲಕ್ಷ ಇರುವ ಒಕ್ಕಲಿಗರು 09 ಬಾರಿ,ಅದಕ್ಕಿಂತಲೂ ಕಡಿಮೆ ಇರುವ ಕುರುಬ ಸಮಾಜದವರು 2 ಬಾರಿ ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಿದ್ದಾರೆ. ಆದರೆ 1.10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಟ ಜಾತಿಯಲ್ಲಿ ಇದುವರೆಗೂ ಓರ್ವ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯವಾಗಿಲ್ಲ.ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯವೆಂಬುದು ಚಾಲ್ತಿಯಲ್ಲಿದೆಯೇ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ ಚನ್ನೇನಹಳ್ಳಿಯ ಶ್ರೀ ಛಲವಾದಿ ಜಗದ್ಗುರು ಪೀಠದ ದಶಮಾನೋತ್ಸವ ಹಾಗೂ ಶ್ರೀಬಸವಲಿಂಗಮೂರ್ತಿಸ್ವಾಮೀಜಿಗಳ 50ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ.ರಾಜ್ಯದಲ್ಲಿ ಛಲವಾದಿ ಸಮುದಾಯ ಸುಮಾರು 52 ಲಕ್ಷದಷ್ಟು ಜನಸಂಖ್ಯೆ ಇದ್ದೇವೆ.ನಮಗೆ ಓರ್ವ ಮುಖ್ಯಮಂತ್ರಿ ಬೇಡವೇ ಎಂಬುದನ್ನು ನಾವೆಲ್ಲರೂ ಆಲೋಚಿಸಬೇಕಿದೆ.ಇಂದು ಮಠಗಳು ದೇಶದ ಚುಕ್ಕಾಣಿ ಹಿಡಿದಿದೆ.ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಸ್ವಾಭಿಮಾನ ಮತ್ತು ಆತ್ಮಾಭಿಮಾನ ಇಲ್ಲದ ನಾವುಗಳು ಒಂದು ಬೇಡುವ ಸ್ಥಿತಿಗೆ ಬಂದಿದ್ದೇವೆ. ಬೇಡುವ ಮನಸ್ಸುಗಳು ಎಂದಿಗೂ ಆಳುವ ಮನಸ್ಸುಗಳಾಗಲು ಸಾಧ್ಯವಿಲ್ಲ ಎಂಬುದನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದೋ ಹೇಳಿದ್ದಾರೆ.1901ರಲ್ಲಿಯೇ ಛಲವಾದಿ ಸಮ್ಮೇಳನ ನಡೆಸಿದ ಸಮುದಾಯ ನಮ್ಮದು.ರಾಜ್ಯದಲ್ಲಿ 50ಕ್ಕೂ ಹೆಚ್ಚು ಛಲವಾದಿ ಮಠಗಳಿವೆ.ಆದರೆ ಅವುಗಳ ಸರಿಯಾದ ಬಳಕೆ ಆಗಿಲ್ಲ.ಮುಂದೆ ಗುರಿಯೂ ಇಲ್ಲ, ಹಿಂದೆ ಗುರುವೂ ಇಲ್ಲದ ಸ್ಥಿತಿಗೆ ಇಂದು ಛಲವಾದಿ ಸಮುದಾಯ ಬಂದಿದೆ ಎಂದು ಶ್ರೀಜ್ಞಾನಪ್ರಕಾಶ್‌ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಮಠಗಳು ಸಮಾಜಕ್ಕೆ, ಸಮುದಾಯಗಳು ಮಠಗಳಿಗೆ ಪರಸ್ವರ ಪೂರಕವಾಗಿ ಕೆಲಸ ಮಾಡಬೇಕಿದೆ.ಮಠಗಳ ಸಹಕಾರದಿಂದ ಅಧಿಕಾರ ಪಡೆದ ಸಮುದಾಯಗಳು ತಿರುಗಿ ಮಠಗಳಿಗೆ ಸಾವಿರಾರು ಎಕರೆ ಭೂಮಿಯ ಜೊತೆಗೆ, ನೂರಾರು ಕೋಟಿ ರೂ ಅನುದಾನವನ್ನು ನೀಡಿವೆ.ನಮ್ಮ ಮಠಗಳು ಆ ರೀತಿ ಶಕ್ತಿಶಾಲಿಯಾದಾಗ ಮಾತ್ರ ಆಳುವ ಸರಕಾರಗಳು ನಮ್ಮ ಮಾತುಗಳಿಗೆ ಮನ್ನಣೆ ನೀಡಲು ಸಾಧ್ಯ. ಹಾಗಾಗಿ ಚನ್ನೇನಹಳ್ಳಿ ಛಲವಾದಿ ಜಗದ್ಗುರು ಪೀಠದ ಜೊತೆಗೆ, ಇಂತಹ ಹತ್ತಾರು ಮಠಗಳು ನಾಡಿನ ಪ್ರತಿ ಜಿಲ್ಲೆಯಲ್ಲಿಯೂ ಹುಟ್ಟಿಕೊಳ್ಳಲಿ, ಇವುಗಳು ಸಮುದಾಯದ ಒಗ್ಗಟ್ಟನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ನುಡಿದರು.
ಅಧಿಕಾರ ಮತ್ತು ಹಕ್ಕು ಇಲ್ಲದ ಸಮುದಾಯ ಅಸ್ಪೃಷ್ಯರಿದ್ದಂತೆ ಎಂದು ಬಾಬಾ ಸಾಹೇಬರೇ ಹೇಳಿದ್ದಾರೆ.ಅಂಬೇಡ್ಕರ್, ಬುದ್ದ, ಬಸವಣ್ಣ ಅವರುಗಳ ಕನಸನ್ನು ನನಸು ಮಾಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು.ಹಾಗಾಗ ಬೇಕೆಂದರೆ ಛಲವಾದಿ ಸಮುದಾಯ ಮದ್ಯ ಮತ್ತು ಮೌಢ್ಯದಿಂದ ಹೊರಬರಬೇಕು.ಒಡೆಯುವುದು ಮನವಾದವಾದರೆ, ಬೆಸೆಯುವುದು ಭೀಮವಾದ.ಇದನ್ನು ನಾವುಗಳು ಅರ್ಥಮಾಡಿಕೊಂಡು ಮುನ್ನೆಡೆದರೆ ಮಾತ್ರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲ ರೀತಿಯ ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಛಲವಾದಿ ಸಮುದಾಯದ ಮುಖಂಡರಾದ ಚಿತ್ರದುರ್ಗದ ಲಕ್ಷಿö್ಮನರಸಿಂಹಯ್ಯ ಮಾತನಾಡಿ,ಈ ಭಾಗದಲ್ಲಿ ಛಲವಾದಿ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಛಲವಾದಿ ಸಮುದಾಯದ ಮಠಗಳಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ.ಇರುವವರೇ ಒಗ್ಗೂಡಿ ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ ಎಂದರು.
ಸರಕಾರಿ ಅಭಿಯೋಜಕರಾದ ರಾಜಣ್ಣ ಮಾತನಾಡಿ,ಮಠಗಳು ಬೆಳೆಯಬೇಕೆಂದರೆ ಭಕ್ತರಿಂದ ಧೇಣಿಗೆ ಅಗತ್ಯ. ಕಟ್ಟೆಮನೆ, ಪೀಠದ ಬಗ್ಗೆ ಅಪಾರ ಗೌರವ ಹೊಂದಿರುವ ಛಲವಾದಿ ಸಮುದಾಯ ಚೆನ್ನೇನಹಳ್ಳಿಯ ಶ್ರೀಛಲವಾದಿ ಜಗದ್ಗುರು ಪೀಠವನ್ನು ಬೆಳೆಸಲು ತಮ್ಮ ಕೈಲಾದ ಧನ ಸಹಾಯ ಮಾಡುವ ಮೂಲಕ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿಗಳ ಶೈಕ್ಷಣಿಕ ಕಾರ್ಯಗಳಿಗೆ ಸಹಕಾರ ನೀಡಬೇಕಿದೆ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಶ್ರೀಛಲವಾದಿ ಜಗದ್ಗರು ಪೀಠದ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ ವಹಿಸಿದ್ದರು.ಡಿ.ಕಲ್ಕರೆ ಅಲ್ಲಮ ಪ್ರಭು ಪೀಠದ ಶ್ರೀತಿಪ್ಪೆರುದ್ರಸ್ವಾಮೀಜಿ,ಮಾಜಿ ಜಿ.ಪಂ.ಸದಸ್ಯ ಎಂ.ಆರ್ ಪರ್ವತಪ್ಪ,ಹನುಮಂತಪ್ಪ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ,ಹರಿಕಥಾ ವಿದ್ವಾನ ಸೋಮಶೇಖರದಾಸ್,ಛಲವಾದಿ ಮುಖಂಡರು ಹಾಗೂ ಭೌಧ್ದ ದಮ್ಮ ಪ್ರಚಾರಕರು ದಾವಣೆಗೆರೆಯ ಹಾಲೇಶಪ್ಪ ನಲ್ಗುದರೆ ಮತ್ತಿತರರು ಉಪಸ್ಥಿತರಿದ್ದರು.
ಐವತ್ತು ವರ್ಷ ಪೂರೈಸಿದ ಶ್ರೀಛಲವಾದಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿಗಳಿಗೆ ಜಿಲ್ಲೆಯಾದ್ಯಂತ ಆಗಮಿಸಿದ್ದ ಭಕ್ತರು ಗುರುವಂದನೆ ಸಲ್ಲಿಸಿದರು.