ಗುಬ್ಬಿ: ಯಾರೋ ಕಿಡಿಗೇಡಿಗಳು ನೀಡಿದ ಮಾಹಿತಿಗೆ ಮತ್ತು ಕೆಲವರ ವ್ಯಯಕ್ತಿಕ ವಿಚಾರಕ್ಕೆ ಕೆಲವು ಪತ್ರಿಕೆಗಳು ಸುಳ್ಳು ಸುದ್ದಿ ಹಬ್ಬಿಸಿವೆ. ಜೊತೆಗೆ ಅಂತಹ ಘಟನೆ ನಮ್ಮಲ್ಲಿ ನಡದೇ ಇಲ್ಲ ಎಂದು ಮಾದ್ಯಮದ ಮುಂದೆ ಬಂದು ಸುದ್ದಿಗೋಷ್ಠಿ ಮಾಡಿ ಹಸುಗೂಸಿನ ಮೇಲೆ ನಡೆದ ಲೈಂಗಿಕ ಕಿರುಕುಳ ಮರೆಮಾಚಲು ನಿಂತವರ ಹೈಡ್ರಾಮಾದ ಮುಂದೆ ಸುಳ್ಳು ಬೆತ್ತಲಾಗಿ ಸತ್ಯ ಬಯಲಾದ ಘಟನೆ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಮೂಲಕ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕೆ ಹರೀವೆಸಂದ್ರ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ನಡೆದಿದೆ ಎನ್ನಲಾದ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಲೈಂಗಿಕ ಕಿರುಕುಳ ನಡೆದಿರುವುದು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಗೌಪ್ಯ ತನಿಖೆಯಿಂದ ಸಾಬೀತಾಗಿ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವ ಮೂಲಕ ಸಂತ್ರಸ್ಥ ಮಗುವಿಗೆ ಫೆಬ್ರವರಿ 5 ರಂದು ನ್ಯಾಯ ಸಿಕ್ಕಂತಾಗಿದೆ.
ಕಳೆದ ಜನವರಿ 14 ರಂದು ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ದೂರು ನೀಡಲು ಬಂದ ಪೋಷಕರಿಗೆ ಠಾಣೆಯಲ್ಲಿ ನೊಂದ ಕುಟುಂಬಕ್ಕೆ ರಕ್ಷಣೆ ನೀಡದೇ ದೂರು ನೀಡದಂತೆ ಒತ್ತಡ ಹೇರುವ ವ್ಯಕ್ತಿಗಳಿಗೆ ಠಾಣೆಯಲ್ಲಿಯೇ ಅವಕಾಶ ಕಲ್ಪಿಸಿ ಪೊಲೀಸರಿಂದ ಪೋಕ್ಸೋ ಪ್ರಕರಣ ಮರೆಮಾಚಿ ಕಾಯಿದೆ ಉಲ್ಲಂಘನೆ ಮಾಡಲಾಗಿದೆ ಎಂದು ಜನವರಿ 19 ರಂದು ನಮ್ಮ ಸುವರ್ಣ ಪ್ರಗತಿ ದಿನಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಲಾಗಿದ್ದು ವರದಿಗೆ ಎಚ್ಚೆತ್ತ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಪರಿಶೀಲನೆ ಗ್ರಾಮಕ್ಕೆ ತೆರಳಿ ಮಗು ಮತ್ತು ಪೋಷಕರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದು ಮಗು ತನಗಾದ ಕಿರುಕುಳ ಮತ್ತು ಹಲ್ಲೆಯ ಬಗ್ಗೆ ತಾಯಿಯ ಜೊತೆಯಲ್ಲಿ ಪೂರ್ಣ ಮಾಹಿತಿ ನೀಡಿದ್ದು ಅಧಿಕಾರಿಗಳು ವಿಡಿಯೋ ಮಾಡಿಕೊಂಡು ಗುಬ್ಬಿ ಸಿಡಿಪಿಒ ಅಧಿಕಾರಿಗಳ ನೆರವಿನಿಂದ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಗಂಭೀರ ಸ್ವರೂಪದ ಪ್ರಕರಣ ಸಾಕಷ್ಟು ಮುನ್ನಲೆಗೆ ಬಂದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು ಬಲಾಡ್ಯರ ಒತ್ತಡಕ್ಕೆ ಒಳಗಾಗಿ ಪ್ರಕರಣ ದಾಖಲಿಸದೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಪೋಷಕರ ಖಾಸಗಿ ಗೌಪ್ಯತೆ ಮತ್ತು ನೊಂದ ಕುಟುಂಬಕ್ಕೆ ನಿರ್ಭೀತಿ ವಾತಾವರಣ ಸೃಷ್ಟಿಸದೇ ರಾಜಿ ಸಂಧಾನಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸರ ನಡೆಗೆ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದಲಿಂಗೇಗೌಡ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಪಡೆದಿದ್ದು ಈ ಹಿನ್ನೆಲೆಯಲ್ಲಿ ನಡೆದ ಸತ್ಯ ಶೋಧನೆ ಹಿರಿಯ ಅಧಿಕಾರಿಗಳ ತನಿಖೆಯ ನಂತರ ಬಯಲಾಗಿ ದೂರು ದಾಖಲಾದ ಹಿನ್ನೆಲೆ ಪೊಲೀಸ್ ಮತ್ತು ಸಿಡಿಪಿಒ ಅಧಿಕಾರಿಗಳ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪತ್ರಿಕೆಗಳಲ್ಲಿ ಲೈಂಗಿಕ ಕಿರುಕುಳ ಬೆಳಕಿಗೆ ತಂದ ಹಿನ್ನೆಲೆ ಪ್ರಕರಣ ಮರೆಮಾಚಲು ಯತ್ನಿಸಿದ್ದ ದೊಡ್ಡ ತಂಡ ಮತ್ತೊಂದು ಹೈಡ್ರಾಮ ನಡೆಸಿ ಸುದ್ದಿಗೋಷ್ಠಿ ಆಯೋಜಿಸಿ ಕೆಲ ಪತ್ರಿಕೆಯಲ್ಲಿ ಇಡೀ ಘಟನೆ ಸುಳ್ಳು.ಯಾರೋ ಕಿಡಿಗೇಡಿಗಳು ಬೇಕಂತಲೇ ಅಪಪ್ರಚಾರ ಮಾಡಿದ್ದಾರೆ ಎಂದು ಘಟನೆಯನ್ನೆ ಅರಿಯದ ಸಂತ್ರಸ್ತ ಬಾಲಕಿಯ ತಂದೆಯಿಂದ ಹೇಳಿಕೆ ನೀಡುವ ಮೂಲಕ ಪ್ರಕರಣ ಮುಚ್ಚಿ ಹಾಕಿದ ಬಲಾಡ್ಯರಿಗೆ ತಕ್ಕ ಉತ್ತರ ನೀಡಿದ ಪ್ರಕರಣಗಳ ಬಳಿಕ ಹೊಸ ತಿರುವು ಪಡೆದು ಪೋಕ್ಸೋ ಪ್ರಕರಣ ದಾಖಲಾಗಿ ನಡೆದಿದೆ ಎನ್ನಲಾದ ಪ್ರಕರಣ ರುಜುವಾತಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಗಂಭೀರತೆ ತಿಳಿಯದೆ ಕೆಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ಪ್ರಕರಣ ತಿರುಚುವಲ್ಲಿ ಸಹಕರಿಸಿದ್ದು ವಿಷಾದನೀಯ.ನಿಷ್ಪಕ್ಷವಾಗಿ ವರ್ತಿಸಬೇಕಿದ್ದ ಕೆಲ ಮಾಧ್ಯಮ ಆಮಿಷಕ್ಕೆ ಬಲಿಯಾಗಿದ್ದು ದುರಂತವೇ ಸರಿ.
– ಜಿ.ಎಸ್.ಮಂಜುನಾಥ್, ಸಾಮಾಜಿಕ ಹೋರಾಟಗಾರ, ಗುಬ್ಬಿ.
ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಘಟನೆ ನಾಗರೀಕ ಸಮಾಜಕ್ಕೆ ನಾಚಿಕೆ ತರುವಂತದ್ದು, ನಡೆದ ಪ್ರಕರಣ ಮರೆ ಮಾಚುವ ಕೆಲಸ ತಿಳಿದೂ ಕೈ ಚೆಲ್ಲಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಸಿದ್ದಲಿಂಗೇಗೌಡ, ಸಂಸ್ಥಾಪಕ ಅಧ್ಯಕ್ಷರು, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ.