ತುಮಕೂರು : ನಮ್ಮ ಸರ್ಕಾರ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರ ಪರವಾಗಿದ್ದು, ಸಮ ಸಮಾಜ ನಿರ್ಮಾಣ ಮಾಡುವ ದಿಕ್ಕಿನಲ್ಲಿ ಸಾಗುತ್ತಿದೆ. ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಮತ್ತು ಈ ಯೋಜನೆಗಳ ಜಾರಿಯಿಂದಾಗಿ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ 8 ತಿಂಗಳಲ್ಲಿ ಜಾರಿ ಮಾಡಲಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಸೇರಿದಂತೆ 5 ಯೋಜನೆಗಳಿಗೆ ಒದಗಿಸಲು ಸರ್ಕಾರದಲ್ಲಿ ಹಣವಿಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವವರಿಗೆ ಇಂದು ಜಿಲ್ಲೆಯಲ್ಲಿ ಆಯೋಜಿಸಿರುವ ಇಂತಹ ಕಾರ್ಯಕ್ರಮಗಳೇ ಉತ್ತರವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯದ ಪಾಲಿನ ಒಂದೇ ಒಂದು ರೂಪಾಯಿ ಬರ ಪರಿಹಾರವನ್ನೂ ನೀಡದೆ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಆದರೆ ರಾಜ್ಯ ಸರ್ಕಾರವು ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದರೊಂದಿಗೆ ಇನ್ಪುಟ್ ಸಬ್ಸಿಡಿಯಡಿ ಜಿಲ್ಲೆಯ 1.61 ಲಕ್ಷ ರೈತರು ಸೇರಿದಂತೆ ರಾಜ್ಯದ 29.29 ಲಕ್ಷ ರೈತರ ಖಾತೆಗೆ 2000 ರೂ.ಗಳಂತೆ ಒಟ್ಟು 555 ಕೋಟಿ ರೂ.ಗಳ ಬರ ಪರಿಹಾರದ ಮೊದಲ ಕಂತನ್ನು ಜಮೆ ಮಾಡಿದೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹೊಸ ಅಭಿವೃದ್ಧಿ ಕಾರ್ಯಗಳನ್ನೂ ಸಹ ಕೈಗೆತ್ತಿಕೊಳ್ಳಲಾಗಿದೆ. ಕೇಂದ್ರದ ಬೆಲೆ ಏರಿಕೆಯಿಂದಾಗಿ ಸೃಷ್ಟಿಯಾಗಿದ್ದ ಸಂಕಷ್ಟವನ್ನು ಕಡಿಮೆ ಮಾಡುವ ಸಲುವಾಗಿ ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನರ ಕೊಳ್ಳುವ ಶಕ್ತಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕಳೆದ 2013-18ರವರೆಗಿನ ನಮ್ಮ ಸರ್ಕಾರ ನಾಡಿಗೆ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಲಾಗಿತ್ತು. ಈ ಬಾರಿ ಚುನಾವಣೆ ವೇಳೆಯಲ್ಲಿ ಕೊಟ್ಟಿದ್ದ ಐದು ಗ್ಯಾರಂಟಿಗಳನ್ನು 8 ತಿಂಗಳ ಒಳಗೆ ಜಾರಿ ಮಾಡಿದ್ದೇವೆ. ಉಳಿದ ಭರವಸೆಗಳನ್ನೂ ಈಡೇರಿಸುತ್ತಲೇ ಇದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಎಲ್ಲಾ ಜಾತಿ ಧರ್ಮದವರು ಇದ್ದಾರೆ ಎಂದು ತಿಳಿಸಿದರಲ್ಲದೆ 2023ರ ಜೂನ್ ಮಾಹೆಯಲ್ಲಿ ಜಾರಿಯಾದ ಶಕ್ತಿ ಯೋಜನೆಯಡಿ 142 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ರಾಜ್ಯದ ಬಡವರು ಹೊಟ್ಟೆತುಂಬಾ ಊಟ ಮಾಡುವ ದೃಷ್ಟಿಯಿಂದ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ 1.28ಕೋಟಿ ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ 1.51ಕೋಟಿ ಕುಟುಂಬಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಗೃಹಲಕ್ಷಿö್ಮ ಯೋಜನೆಯಡಿ 1.18 ಕೋಟಿ ಮನೆ ಯಜಮಾನಿಯರ ಖಾತೆಗೆ 2000 ರೂ., ಯುವನಿಧಿ ಯೋಜನೆಯಡಿ 4 ಲಕ್ಷ ಪದವಿ/ಡಿಪ್ಲೋಮ ಹೊಂದಿದ ನಿರುದ್ಯೋಗಿಗಳಿಗೆ 2ವರ್ಷದವರೆಗೆ ಉದ್ಯೋಗ ಭತ್ಯೆ ತಲುಪುತ್ತಿದ್ದು, ಉದ್ಯೋಗ ಭತ್ಯೆಯೊಂದಿಗೆ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ನಿರುದ್ಯೋಗಿ ಯುವಕರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ತುಮಕೂರು ನೂತನ ಬಸ್ ನಿಲ್ದಾಣಕ್ಕೆ ದೇವರಾಜು ಅರಸು ಬಸ್ ನಿಲ್ದಾಣ ಎಂದು ನಾಮಕರಣ:-
ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಇನ್ನು ಮುಂದೆ ದೇವರಾಜ ಅರಸು ಅವರ ಹೆಸರಲ್ಲಿ ಬಸ್ ನಿಲ್ದಾಣ ಕಾರ್ಯನಿರ್ವಹಿಸಲಿದೆ ಎಂದರು.
ವಿವಿಧ ಸಂಪನ್ಮೂಲಗಳ ಕ್ರೋಢೀಕರಣದಿಂದ ಪ್ರಸಕ್ತ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 38 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಬರುವ 2024-25ನೇ ಸಾಲಿಗಾಗಿ 58ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜನರ ಆಶೀರ್ವಾದದಿಂದ ಎರಡನೆ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಅಧಿಕಾರಕ್ಕೆ ಬಂದ ನಂತರ ಎಲ್ಲಾ ಜನಾಂಗಕ್ಕೂ ಅನುಕೂಲ ಮಾಡಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗಿದೆ ಎಂದರಲ್ಲದೆ, ಗೃಹ ಸಚಿವರು ಮನವಿ ಮಾಡಿರುವ ಎಲ್ಲ ಬೇಡಿಕೆಗಳನ್ನೂ ಈಡೇರಿಸುತ್ತೇನೆಂದು ಭರವಸೆ ನೀಡಿದರು.
ಎರಡನೇ ಬೆಂಗಳೂರಾಗಿ ತುಮಕೂರು:- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕಲ್ಪತರು ನಾಡು, ಧಾರ್ಮಿಕ ಕ್ಷೇತ್ರವೆಂದೆನಿಸಿಕೊಂಡಿರುವ ತುಮಕೂರು ಜಿಲ್ಲೆಯು ಎರಡನೇ ಬೆಂಗಳೂರಾಗಲಿದೆ. ಮುಂದಿನ 50ವರ್ಷಕ್ಕೆ ತುಮಕೂರು ಜಿಲ್ಲೆಯನ್ನು ಹೊಸ ಬೆಂಗಳೂರನ್ನಾಗಿ ನಿರ್ಮಿಸಲು ತಯಾರಿ ಮಾಡಿಕೊಳ್ಳಬೇಕೆಂಬ ಆಶಾಭಾವನೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಕನಸಿನ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಿದೆಯಲ್ಲದೆ ಪ್ರಜೆಗಳಿಗೆ ಆರ್ಥಿಕ ಶಕ್ತಿಯನ್ನೂ ತಂದಿದೆ. ನಮ್ಮ ಯೋಚನೆಯು ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ ಇನ್ನೂ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದರಲ್ಲದೆ ನಾನು ತುಮಕೂರಿಗೆ ಬಂದಾಗ ಪಾವಗಡ ಸೋಲಾರ್ ಪಾರ್ಕ್ ನೆನಪಿಗೆ ಬರುತ್ತದೆ. ಇನ್ನೂ 10,000 ಹೆಕ್ಟೇರ್ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ವಿಸ್ತರಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು
ಜಿಲ್ಲೆಯಲ್ಲಿ ಹಾದು ಹೋಗುವ ಬೃಹತ್ ನೀರಾವರಿ ಯೋಜನೆಗಳಾದ ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಡಾ|| ಜಿ. ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರ ಏಳಿಗೆ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಸುಮಾರು 657 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೇ ದಿನ 120 ಅಡಿಗಲ್ಲುಗಳಿಗೆ ಚಾಲನೆ ನೀಡಿರುವುದು ತುಮಕೂರಿನ ಇತಿಹಾಸದಲ್ಲಿ ಇದೇ ಪ್ರಥಮ. ನಮ್ಮ ಸರ್ಕಾರ ಆಡಳಿತಕ್ಕೆ ಬಂದು ಮೊದಲ ಸಂಪುಟ ಸಭೆಯಲ್ಲೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಯಿತು ಎಂದು ತಿಳಿಸಿದರಲ್ಲದೆ ತುಮಕೂರು ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಡಿ ಪ್ರಯೋಜನ ಪಡೆದ ಫಲಾನುಭವಿಗಳ ಅಂಕಿ-ಅಂಶಗಳ ಬಗ್ಗೆ ವಿವರಣೆ ನೀಡಿದರು
ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರದಲ್ಲಿ 35 ವಾರ್ಡ್ಗಳಲ್ಲಿ 6 ವಾರ್ಡ್ಗಳಿಗೆ ಸ್ಮಾರ್ಟ್ ಸಿಟಿ ಹಣ ಬಂದಿದೆ. ಉಳಿದ ವಾರ್ಡ್ಗಳು ಅಭಿವೃದ್ಧಿಯಾಗಿಲ್ಲ. ಹಾಗಾಗಿ ಈ ಆಯವ್ಯಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 500 ಕೋಟಿ ರೂ.ಗಳ ಅನುದಾನ ಒದಗಿಸಬೇಕೆಂದರಲ್ಲದೆ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರಿಗೆ ಬೆಂಗಳೂರಿನಿಂದ ಮೆಟ್ರೊ ಯೋಜನೆ ಮಂಜೂರು, ತುಮಕೂರು ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ 200 ಕೋಟಿ ರೂ.ಗಳ ಅನುದಾನ, ಏಷ್ಯಾದಲ್ಲಿಯೇ ಬಹು ಎತ್ತರದ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಅಗತ್ಯ ಅನುದಾನ, ಕೈಗಾರಿಕಾ ಪ್ರದೇಶ ಅಭಿವೃದ್ಧಿಯಡಿ ವಸಂತ ನರಸಾಪುರಕ್ಕೆ ಇಂಟಿಗ್ರೇಟೆಡ್ ಟೌನ್‌ಶಿಪ್ ಸೌಲಭ್ಯ, ನೆನೆಗುದಿಗೆ ಬಿದ್ದಿರುವ ಭದ್ರ ಮೇಲ್ದಂಡೆ ಯೋಜನೆಗೆ ಅನುದಾನ, ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಘೋಷಿಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಉದ್ಘಟಿಸಿದರು. ನಂತರ ಅರ್ಹ ಫಲಾನುಭವಿಗಳಿಗೆ ಲ್ಯಾಪ್‌ಟಾಪ್, ಕೃತಕ ಕೈ-ಕಾಲು, ವಿದ್ಯುತ್ ಚಾಲಿತ ವೀಲ್ ಚೇರ್ ಸೇರಿದಂತೆ ವಿವಿಧ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ವಂದಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎನ್.ರಾಜಣ್ಣ, ಕೃಷ್ಣ ಭೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಆಯುಕ್ತೆ ಅಶ್ವಿಜ ಹಾಗೂ ಕೃಷಿ, ರೇಷ್ಮೆ, ತೋಟಗಾರಿಕೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆ/ನಿಗಮಗಳ ಅಧಿಕಾರಿಗಳು ಉಪಸ್ಥಿತರಿದ್ದರು.