ಸಮಾಜದ ಅಸ್ಮಿತೆಗಾಗಿ ಸಂಘಟಿತ ಹೋರಾಟ ನಡೆಸಿ : ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ
ತುರುವೇಕೆರೆ : ಸಮುದಾಯದ ಅಸ್ಮಿತೆಗಾಗಿ ಎಲ್ಲರೂ ಜ್ಞಾನವಂತರಾಗುವ ಮೂಲಕ ಸಂಘಟಿತರಾಗುವ ಮೂಲಕ ಹೋರಾಟಕ್ಕೆ ಸಜ್ಜಾಗಿ ಎಂದು ಚಿತ್ರದುರ್ಗ ಶ್ರೀ ನಿರಂಜನ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.
ಪಟ್ಟಣದಲ್ಲಿ ಬೋವಿ ಜನಾಂಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಿದ್ದರಾಮೇಶ್ವರ ಜಯಂತಿ ಮತ್ತು ಬೋವಿ ಸಮಾವೇಶ ಹಾಗೂ ಮಾತೃವಂದನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಸಮುದಾಯ ಬಂಧುಗಳು ಜಾಗೃತರಾಗಬೇಕಿದೆ. ಸಮುದಾಯದ ಹೆಣ್ಣು ಮಕ್ಕಳನ್ನು ಅತ್ಯಂತ ಗೌರವಯುತವಾಗಿ ಕಾಣುವ ಮೂಲಕ ಅಭಿವೃದ್ದಿ ಹೊಂದಬೇಕಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಮುದಾಯ ಒತ್ತ ನೀಡಬೇಕು, ಪ್ರಚಲಿತ ವಿದ್ಯಾಮಾನಗಳನ್ನು ಅರಿಯುವ ಮೂಲಕ ಸಮುದಾಯದ ಏಳಿಗೆಗೆ ಚಿತ್ತ ಹರಿಸಿ ಎಂದರು.
ಬೋವಿ. ಓ.ಸಿ.ಸಿ.ಐ. ಅಧ್ಯಕ್ಷ ಮಾಕಳಿ ರವಿ ಮಾತನಾಡಿ ನಮ್ಮ ಜನಾಂಗದ ಏಳಿಗೆಗೆ ಸದಾಶಿವ ಆಯೋಗ ಜಾರಿಯಾದರೇ ಮಾರಕವಾಗುತ್ತದೆ. ಈಗಾಗಲೇ ರಾಜಧಾನಿಯಲ್ಲಿ ಕೊರಮ, ಕೊರಚ, ಲಂಬಾಣಿ ಸಮುದಾಯದವರೊಡಗೂಡಿ ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಹೋರಾಟ ನಡೆಸಲಾಗಿದೆ. ಬಿ.ಜೆ.ಪಿ. ಸರಕಾರ ಸದಾಶಿವ ಆಯೋಗ ವರದಿ ಜಾರಿಗೆ ಒಲವು ತೋರಿದರೇ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಅಂಬೇಡ್ಕರ್ ಅವರು ತೋರಿದ ಹಾದಿಯಲ್ಲಿ ಸಮುದಾಯದ ಶಿಕ್ಷಿತರಾಗುವ ಮೂಲಕ ಸಂಘಟಿತರಾಗಿ, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ. ಮಕ್ಕಳನ್ನು ವಿದ್ಯಾವಂತರನ್ನು ಮಾಡುವ ಮೂಲಕ ಸಮುದಾಯದ ಪ್ರಗಇ ಸಾದಿಸಲಿ, ಬೋವಿ ಸಮುದಾಯದ ಏಳಿಗೆಗೆ ಪೂರಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಪೂರ್ಣ ಕುಂಭಸ್ವಾಗತದೊಂದಿಗೆ ಚಿತ್ರದುರ್ಗ ಶ್ರೀ ನಿರಂಜನ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮ್ಭಿಜಿಯವರನ್ನು ವೇದಿಕೆವರೆಗೂ ಮೆರವಣಿಗೆ ಮಾಡಲಾಯಿತು. ಶ್ರೀಗಳ ಸಮ್ಮುಖದಲ್ಲಿ ಮಾತೃವಂದನಾ ಕಾರ್ಯಕ್ರಮ ನಡೆಸಲಾಯಿತು.
ತಾಲೂಕು ಬೋವಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆರ್. ಮಹಾಲಿಂಗಯ್ಯ, ಬೋವಿ ಸಂಘದ ರಾಜ್ಯಾದ್ಯಕ್ಷ ಗೌಮ್ ವೆಂಕಿ, ಜಿಲ್ಲಾಧ್ಯಕ್ಷ ಉಮೇಶ್, ಓಂಕಾರ್, ಕೇಶವಾಬೋವಿ, ಗುರಪಾದ್, ಹನುಮಂತಣ್ಣ, ತಾಲೂಕು ಪದಾದಿಕಾರಿಗಳಾದ ಬಸವರಾಜ್, ಶಿವಲಿಂಗಯ್ಯ, ಉಪಾದ್ಯಕ್ಷ ತಿರುಮಲಯ್ಯ, ಕಾರ್ಯದರ್ಶಿ ಮಂಜುನಾಥ, ಸಂಚಾಲಕ ಸುರೇಶ್, ಡಿ.ಬಿ.ಹಟ್ಟಿ ಗಿರೀಶ್ ಮತ್ತಿತರಿದ್ದರು.