ಶಿರಾ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ರವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಶಿರಾ ನಗರಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಮಾಡಿರುವ ಸಾಧನೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಸಲುವಾಗಿ ಹಮ್ಮಿಕೊಂಡಿರುವ ಜನಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ. ಬಿಜೆಪಿ ಪಕ್ಷ ರಾಜ್ಯದಲ್ಲಿ ಮೂರು ವರ್ಷ ಅಧಿಕಾರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಮುಂದಿನ ಆಲೋಚನೆಗಳನ್ನು ಜನರಿಗೆ ತಿಳಿಸುವುದು. ಶಿರಾ ತಾಲ್ಲೂಕಿಗೆ ಸಂಬಂಧಿಸಿದಂತೆ ಎರಡೂವರೆ ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಮುಂದೆ ತಾಲ್ಲೂಕಿನ ಅಭಿವೃದ್ಧಿಗೆ ಇರುವ ಯೋಜನೆ ಬಗ್ಗೆ ತಿಳಿಸಲಿದ್ದಾರೆ.
ಜೆಪಿ ನಡ್ಡಾರವರು ಕೇಂದ್ರ ಸರ್ಕಾರದ ಸಾಧನೆಗಳು ರಾಜ್ಯದ ಅಭಿವೃದ್ಧಿ ಪರ ಇರುವ ಆಲೋಚನೆಗಳ ಬಗ್ಗೆ ತಿಳಿಸಲಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಜಿಲ್ಲೆಯ ಅನೇಕ ಶಾಸಕರು ಆಗಮಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಎಂದು ತಿಳಿಸಿದರು.
ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರು ಪ್ರಪ್ರಥಮ ಭಾರಿಗೆ ಶಿರಾ ತಾಲ್ಲೂಕಿಗೆ ಆಗಮಿಸುತ್ತಿದ್ದಾರೆ. ಮಧುಗಿರಿ ವಿಭಾಗದಲ್ಲಿ ಇರುವ ನಾಲ್ಕು ತಾಲ್ಲೂಕುಗಳಲ್ಲಿ ಬಿಜೆಪಿ ಪಕ್ಷ ಗೆಲ್ಲಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಪಕ್ಷದಿಂದ ಪಕ್ಷ ಸಂಘಟನೆ ಮಾಡಿ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ತಯಾರಿ ನಡೆಯುತ್ತಿದೆ. ಶಿರಾ ಉಪಚುನಾವಣೆಯಲ್ಲಿ ನೀಡಿದ್ದ ಎಲ್ಲಾ ವಾಗ್ದಾನಗಳನು ಪೂರೈಸಿದ್ದೇವೆ. ನೀರಾವರಿ ಯೋಜನೆಗಳು, ಜುಂಜಪ್ಪನಗುಡ್ಡೆಗೆ 1 ಕೋಟಿ ರೂ ಬಿಡುಗಡೆ, ಮದಲೂರು ಕೆರೆಗೆ ನೀರು ಹರಿಸಿರುವುದು ಹಾಗೂ ಪ.ಜಾತಿ ಮತ್ತು ಪಂಗಡಕ್ಕೆ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ಸದಸ್ಯರಾದ ಕೃಷ್ಣಮೂರ್ತಿ, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಮುದಿಮಡು ಮಂಜುನಾಥ್, ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.