ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ.ಅಕ್ಕಿ, ನೀರಾವರಿಗೆ 2 ಲಕ್ಷ ಕೋಟಿ ಮೀಸಲು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ತುರುವೇಕೆರೆ : ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಒಬ್ಬರಿಗೆ 10 ಕೆ.ಜಿ. ಅಕ್ಕಿ ಹಾಗೂ ನೀರಾವರಿಗೆ 2 ಲಕ್ಷ ಕೋಟಿ ಹಣ ಮೀಸಲಿಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಪಟ್ಟಣದ ಗುರುಭವನ ಆವರಣದಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದ ಬಡ ಜನರ ಶೋಷಿತರ ಉಳಿವಿಗಾಗಿ ಹಾಗೂ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಡಿ.ಕೆ.ಶಿವಕುಮಾರ್ ನಾನು ರಾಜ್ಯ ವ್ಯಾಪಿ ಸಂಚರಿಸುತ್ತಿದ್ದೇವೆ. ಭ್ರಷ್ಟಾಚಾರದಿಂದ ಬೇಸತ್ತ ರಾಜ್ಯದ ಜನತೆ ಬಿ.ಜೆ.ಪಿ.ಯನ್ನು ಕಿತ್ತೊಗೆಯಬೇಕೆಂದು ಮಾತನಾಡುತ್ತಿದ್ದಾರೆ. ರಾಜ್ಯದಲಿ ಜನಪರ ಆಡಳಿತ ನೀಡಿದ್ದ ಕಾಂಗ್ರೇಸ್ ಪಕ್ಷದ ಪರ ಜನತೆ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಎಷ್ಟು ಖಚಿತವೋ ತುರುವೇಕೆರೆಯಿಂದ ಕಾಂಗ್ರೇಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಗೆಲುವು ಸಾಧಿಸುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತಿಹಾಸದಲ್ಲಿಯೂ ಬಿ.ಜೆ.ಪಿಯಂತಹ ಭ್ರಷ್ಟ ಸರ್ಕಾರವನ್ನು ನಾನು ಕಂಡಿರಲಿಲ್ಲ, ಬಿಜೆಪಿ ಸರ್ಕಾರದಲ್ಲಿ ಶೇ 40 ಭ್ರ‍್ರಷ್ಟಚಾರದಲ್ಲಿ ಮುಳುಗಿದೆ. ಲೋಕೋಪಯೋಗಿ ಇಲಾಖೆಯಲ್ಲಿಯೇ 26ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ಧಾರೆ. ಪ್ರದಾನಿ ನರೇಂದ್ರ ಮೋದಿಯವರು ಬಂಡವಾಳ ಶಾಹಿಗಳ ಸಾವಿರಾರು ಕೋಟಿ ಸಾಲ ಮನ್ನ ಮಾಡಿರುವುದೇ ಸಾಧನೆ ಎಂದು ಕುಟುಕಿದರು.
ಬದಲಾವಣೆ ಗಾಳಿ ಬೀಸುತ್ತಿದೆ:-
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ. ರಾಜ್ಯದಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡಿದ್ದರೆ ಬಿಎಸ್.ವೈ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕುತ್ತಿದ್ದರು. ಬಿ.ಜೆ.ಪಿ, ಸರಕಾರ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ರಾಜ್ಯ ವ್ಯಾಪಿ ಬದಲಾವಣೆ ಗಾಳಿಬೀಸಲಾರಂಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ 136 ಸೀಟ್, ಬಿಜೆಪಿ 60 ಸೀಟ್ ಗೆಲಲ್ಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.ಬಿಜೆಪಿ ಹಾಗೂ ಜೆಡಿಎಸ್ ಮುಖಂಡರುಗಳು ಕಾರ್ಯಕರ್ತರುಗಳು ಸಮಯವನ್ನು ವ್ಯರ್ಥ ಮಾಡದೇ ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಕರೆ ನೀಡಿದರು.
ಅಭ್ಯರ್ಥಿ ಘೋಷಣೆ ಇಲ್ಲ
ತುರುವೇಕೆರೆಯಲ್ಲಿ ಇಂದು ನಡೆದ ಸಮಾವೇಶದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಗೋಷಣೆ ಯಾಗಬಹುದೆಂಬ ಹಲವರ ನಿರೀಕ್ಷೆ ಹುಸಿಯಾಯಿತು. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದಷ್ಟೇ ಹೇಳಿದ ಡಿ.ಕ..ಶಿವಕುಮಾರ್, ಬೆಮೆಲ್ ಕಾಂತರಾಜು ಜೆ.ಡಿ.ಎಸ್. ಎಂ.ಎಲ್.ಸಿ. ಆಗಿದ್ದವರು ನಮ್ಮ ಪಕ್ಷಕ್ಕೆ ಬಂಧಿದ್ದಾರೆ. ವೇದಿಕೆಯಲ್ಲಿ ಹಲವು ನಾಯಕರು ಟೀಕೇಟ್ ಆಕಾಂಕ್ಷಿಗಳಿದ್ದಾರೆ. ನಮ್ಮ ಪಕ್ಷವನ್ನು ಕಷ್ಟಕಾಲದಲ್ಲಿಯೂ ಕೈ ಹಿಡಿದವರನ್ನು ಪಕ್ಷ ಮರೆಯುವುದಿಲ್ಲ ಎಂದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ ತೆರದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಬೈರತಿ ಸುರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕ ಷಡಕ್ಷರಿ, ಮಧುಬಂಗಾರಪ್ಪ, ಬೆಮೆಲ್ ಕಾಂತರಾಜು, ಮುಖಂಡರಾದ ಮುರುಳಿಧರಹಾಲಪ್ಪ, ಲೋಕೇಶ್ವರ್, ಬಿ.ಎಸ್. ವಸಂತ್‌ಕುಮಾರ್, ಚೌದ್ರಿರಂಗಪ್ಪ, ಗೀತಾರಾಜಣ್ಣ. ಬಿ.ಎಸ್. ವಸಂತ್‌ಕುಮಾರ್, ಎನ್.ಆರ್.ಜಯರಾಮ್, ಸುಬ್ರಮಣಿಶ್ರೀಕಂಠೇಗೌಡ, ಎನ್.ಆರ್.ಜಯರಾಮ್, ರಾಯಸಂದ್ರರವಿಕುಮಾರ್, ಬ್ಲಾಕ್ ಅಧ್ಯಕ್ಷರುಗಳಾದ ನಾಗೇಶ್, ಹಾಗೂ ಪ್ರಸನ್ನ ಸೇರಿದಂತೆ ಅನೇಕರಿದ್ದರು.