ತುಮಕೂರು : ತುಮಕೂರು ನಗರದ ಕಸಬಾ ಪೂರ್ವ ಸರ್ವೆ ನಂ 268 ರಲ್ಲಿ ಮೈಸೂರು ಮಹಾರಾಜರು ಕಾಯ್ದಿರಿಸಿದ್ದ 6.10 ಎಕರೆ ಸರಕಾರಿ ಗುಂಡುತೋಪುನ್ನು ಹೈಕೋರ್ಟು ಮತ್ತು ಸುಪ್ರಿಂಕೋರ್ಟಿನ ಆದೇಶ ಉಲ್ಲಂಘಿಸಿ, ಖಾಸಗಿಯವರಿಗೆ ಖಾತೆ ಮಾಡಿದ್ದು,ಸದರಿ ಜಾಗದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವಸತಿ ಸಮುಚ್ಚಯ ನಿರ್ಮಾಣವಾಗಿದ್ದು,ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಒತ್ತಾಯಿಸಿ ಪ್ರಕರಣ ನಡೆಯಿತು.
ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆವತಿಯಿಂದ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ದಲಿತರ ಶವಸಂಸ್ಕಾರಕ್ಕೆ ಸ್ಮಶಾನ ಗುರುತಿಸುವ ವಿಚಾರದಲ್ಲಿ ಚರ್ಚೆ ನಡೆಯುವ ವೇಳೆ,ವಿಷಯ ಪ್ರಸ್ತಾಪಿಸಿದ ಭೂ ನ್ಯಾಯಮಂಡಳಿ ಮಾಜಿ ಸದಸ್ಯ ರಂಗಯ್ಯ,ಕೇಬಲ್ ರಘು,ರಾಮಯ್ಯ ಸೇರಿದಂತೆ ಹಲವು ಮುಖಂಡರು,ದಲಿತರು ಸ್ಮಶಾನಕ್ಕೆ ಜಾಗ ಕೇಳಿದರೆ ಸರಕಾರಿ ಜಾಗವಿಲ್ಲ.ನೀವೇ ಸೂಕ್ತ ಜಾಗ ತೋರಿಸಿದರೆ ಮಂಜೂರು ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.ಆದರೆ ಗೋಮಾಳಗಳನ್ನು ಪರಭಾರೆ ಮಾಡಬಾರದು ಎಂಬ ಕಾಯ್ದೆ ಇದ್ದರೂ,ಸರ್ವೇ ನಂ 268 ರಲ್ಲಿದ್ದ 6.10 ಎಕರೆ ಜಾಗವನ್ನು ಬಗರ್ ಹುಕ್ಕಂ ಮಂಜೂರಾತಿಯ ಸುಳ್ಳು ದಾಖಲೆ ಸೃಷ್ಟಿಸಿ, ಬೇರೊಬ್ಬರಿಗೆ ಮಾರಾಟ ಮಾಡಿದ್ದು, ಸದರಿ ಜಾಗದಲ್ಲಿ ಹೊಟೇಲ್, ಬಾರ್, ರಸ್ಟೋರೆಂಟ್ ಹಾಗೂ ನೂರಾರು ಸೈಟ ಮಾಡಿ ಮಾರಾಟ ಮಾಡಿದ್ದಾರೆ.ಇದರ ಬಗ್ಗೆ ತನಿಖೆ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿ,ಜಾಗ ಖುಲ್ಲಾ ಗೊಳಿಸುವಂತೆ ದಾಖಲೆಗಳ ಸಮೇತ ಒಕ್ಕೊರಲ ಆಗ್ರಹ ಮಾಡಿದರು.
ತುಮಕೂರು ನಗರದ ಸುತ್ತಮುತ್ತ ಇರುವ ಸರಕಾರಿ ಜಾಗಗಳನ್ನು ಬಲಿಷ್ಠರು ಒತ್ತುವರಿ ಮಾಡಿಕೊಂಡಿದ್ದಾರೆ.ಎನ್.ಆರ್. ಕಾಲೋನಿ ಜನರಿಗೆಂದು ಮೀಸಲಿರಿಸಿದ್ದ ಸ್ಮಶಾನಕ್ಕೆ ಹೋಗಲು ಇದ್ದ ಬಂಡಿ ಜಾಡನ್ನು ಒತ್ತುವರಿ ಮಾಡಲಾಗಿದೆ.ಕೆರೆ ಅಂಗಳವನ್ನು ಒತ್ತುವರಿ ಮಾಡಿ,ಚೈತನ್ಯ ಟೆಕ್ನೋ ಎಂಬ ಶಾಲೆ,ಪೆಟ್ರೋಲ್ ಬಂಕ್ ಕಟ್ಟಲಾಗಿದೆ.ಜಿಲ್ಲಾಡಳಿತ ದಲಿತರ ಸ್ಮಶಾನದ ವಿಚಾರ ಬಂದಾಗ ಹತ್ತಾರು ಕಾಯ್ದೆ,ಕಾನೂನುಗಳನ್ನು ಹೇಳಿ ಬಾಯಿ ಮುಚ್ಚಿಸುತ್ತಾರೆ. ಅದೇ ಬಲಿತವರು ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡರೂ ಜಾಣ ಕುರುಡು ಪ್ರದರ್ಶನ ಮಾಡುತ್ತದೆ.ಇಂತಹ ತಾರತಮ್ಯ ಸಹಿಸುವುದಲ್ಲ.ಕೂಡಲೇ ಯಾವ ಗ್ರಾಮದಲ್ಲಿ ಶೇ50ಕ್ಕಿಂತಲೂ ಹೆಚ್ಚು ದಲಿತ ಜನಸಂಖ್ಯೆ ಇದ್ದರೆ ಅಂತಹ ಗ್ರಾಮದಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನ ಹಾಗೂ ಕಡಿಮೆ ಜನಸಂಖ್ಯೆ ಇರುವ ಕಡೆ ಸಾರ್ವಜನಿಕ ಸ್ಮಶಾನದಲ್ಲಿ ದಲಿತ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡರ ಒತ್ತಾಯಕ್ಕೆ ಉತ್ತರಿಸಿದ ತಾಲೂಕು ದಂಡಾಧಿಕಾರಿ ಸಿದ್ದೇಶ್,ಮುಂದಿನ ಒಂದು ತಿಂಗಳ ಒಳಗೆ ಈಗಾಗಲೇ ತಾಲೂಕಿನಲ್ಲಿ ಸ್ಮಶಾನ ಗುರುತಿಸಿರುವ 22 ಹಳ್ಳಿಗಳ ಜಮೀನು ಅಳತೆ ಮಾಡಿಸಿ,ಹದ್ದುಬಸ್ತು ಮಾಡಿ, ನಾಮಫಲಕ ಅಳವಡಿಸುವ ಕೆಲಸ ಮಾಡಲಾಗುವುದು.ಅಲ್ಲದೆ ಎಲ್ಲೆಲ್ಲಿ ಸಾರ್ವಜನಿಕ ಸ್ಮಶಾನಗಳಿವೆಯೋ ಅಲ್ಲಿ, ದಲಿತರು ತಮ್ಮವರ ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗೂಳೂರು ಸರ್ವೆ ನಂಬರ್ 90ರ ಸ್ಮಶಾನ ಜಾಗ ಹದ್ದುಬಸ್ತಿಗೆ ಜನವರಿ 13,ಅರಕೆರೆ ಗ್ರಾಮದ ಸರ್ವೆ ನಂ 93 ಸೇರಿದ ಸ್ಮಶಾನ ಜಾಗದ ಹದ್ದುಬಸ್ತಿಗೆ ಜನವರಿ 18ರಂದು ಸರ್ವೆ ಇಲಾಖೆಯೊಂದಿಗೆ ಸ್ತಳ ಪರಿಶೀಲನೆಗೆ ಬರುವುದಾಗಿ ತಹಶೀಲ್ದಾರ್ ಸಿದ್ದೇಶ್ ಅರ್ಜಿದಾರಿಗೆ ಮಾಹಿತಿ ನೀಡಿದರು.
ತಾಲೂಕು ಸಮಾಜ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಮಾತನಾಡಿ,ತಾಲೂಕಿನ ಯಾವ ಗ್ರಾಮಗಳಲ್ಲಿ ಶೇ50ಕ್ಕಿಂತಲೂ ಹೆಚ್ಚು ದಲಿತ ಸಮುದಾಯದ ಜನಸಂಖ್ಯೆ ಇರುವ ಗ್ರಾಮಗಳನ್ನು ಗುರುತಿಸಿ,ಆ ಗ್ರಾಮಗಳಲ್ಲಿ ದಲಿತರಿಗೆ ಪ್ರತ್ಯೇಕ ರುದ್ರಭೂಮಿ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮುಂದಿನ 10 ದಿನಗಳ ಒಳಗೆ ಪ್ರಸ್ತಾವನೆ ಸಲ್ಲಿಸಲಾಗುವುದು.ಅಲ್ಲದೆ ಈಗಾಗಲೇ ಸ್ಮಶಾನ ಜಾಗ ಗುರುತಿಸಿರುವ ಹಳ್ಳಿಗಳಲ್ಲಿ ಸ್ಮಶಾನ ಭೂಮಿಯನ್ನು ಎಸ್.ಸಿ.ಪಿ ಹಣದಲ್ಲಿ ಅಭಿವೃದ್ದಿ ಪಡಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಾ.ಪಂ.ಇಓ ಜೈಪಾಲ್,ನಗರಪಾಲಿಕೆ ಉಪ ಆಯುಕ್ತರು,ಕಂದಾಯ ಅಧಿಕಾರಿಗಳು, ಡಿವೈಎಸ್ಪಿ ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು,ಕಂದಾಯ ಇಲಾಖೆಯ ನೌಕರರು,ದಲಿತ ಮುಖಂಡರು ಉಪಸ್ಥಿತರಿದ್ದರು.