ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಿ : ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಹುಳಿಯಾರು : ಪೂರ್ವಿಕರು ನಮಗಾಗಿ ಉಳಿಸಿ ಕೊಟ್ಟಿರುವ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ನಾವು ಉಳಿಸಿ, ಬೆಳಸಿ ಕೊಡಬೇಕು ಎಂದು ಯದುವಂಶದ 27 ನೇ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.
ಹುಳಿಯಾರು ಕೆರೆ ಹಾಗೂ ಸಮೀಪದ ಬೋರನಕಣಿವೆ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ರಾಜಮಹಾರಾಜರು ಪ್ರಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಎನ್ನುವಂತೆ ಇಲ್ಲಿನ ಬೋರನಕಣಿವೆ ಜಲಾಶಯವಾಗಿದೆ. ಈ ಜಲಾಶಯದಿಂದ ಈ ಭಾಗ ಅಂತರ್ಜಲವೃದ್ಧಿಯಾಗಿ ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ ಎಂದರಲ್ಲದೆ ಪ್ರಕೃತಿ ಮೇಲಿನ ಹಾನಿಯಿಂದಾಗಿ ವಾತವರಣದ ಏರುಪೇರಾಗಿ ಅಕಾಲಿಕ ಮಳೆ, ಪ್ರವಾಹ, ಬಿಸಿಗಾಳಿ ಸೇರಿದಂತೆ ಅನೇಕ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗಾಗಿ ಈಗಿನ ಪೀಳಿಗೆ ಏನೇ ಅಭಿವೃದ್ಧಿ ಮಾಡಿದರೂ ಪ್ರಕೃತಿಯನ್ನು ಉಳಿಸಿ ಮಾಡುವುದು ಒಳಿತು ಎಂದು ಸಲಹೆ ನೀಡಿದರು.
ಮೈಸೂರು ಮಹಾರಾಜರ ನೀರಾವರಿ ಯೋಜನೆಗಳನ್ನು ಓದಿದ್ದೆ, ಕೇಳಿದ್ದೆ. ಆದರೆ ರಾಜರು ಕಟ್ಟಿದ ಜಲಾಶಯಗಳನ್ನು ಬಂದು ನೋಡಲು ಆಗಿರಲಿಲ್ಲ. ಈಗ 10 ನೇ ಚಾಮರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಬೋರನಕಣಿವೆ ಜಲಾಶಯ ನೋಡುವ ಸುಯೋಗ ಕೂಡಿ ಬಂದಿದೆ. ಇದಕ್ಕೆ ಕಾರಣಕರ್ತರಾರ ಜೆ.ಸಿ.ಮಾಧುಸ್ವಾಮಿ ಹಾಗೂ ಈ ಭಾಗದ ಜನರಿಗೆ ವಂದಿಸುತ್ತೇನೆ ಎಂದರು.
–
ಜೆ.ಸಿ.ಪುರದಿಂದ ಬೋರನಕಣಿವೆ ಜಲಾಶಯದವರೆವಿಗೂ ಪ್ರಯಾಣ ಮಾಡಿದ ಅನುಭವ ಅದ್ಭುತವಾಗಿದೆ. ನಗರದಲ್ಲಿ ಇರುವವರಿಗೆ ಇಲ್ಲಿನ ಹಸಿರು ಪರಿಸರ, ಪ್ರಕೃತಿ ಸೋಬಗು ಮನತಣಿಸುತ್ತದೆ. ಇದನ್ನು ಹೀಗೆಯೇ ಉಳಿಸಿ ಮುಂದಿನ ಪೀಳಿಗೆಗೆ ಕೊಡಬೇಕು. ಈ ನಿಟ್ಟಿನಲ್ಲಿ ಯುವ ಜನತೆ ಜಾಗೃತರಾಗಬೇಕಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲ ಸುವರ್ಣಯುಗ ಎನ್ನುತ್ತಾರೆ. ಈ ಸುವರ್ಣಯುಗಕ್ಕೆ ಬೀಜ ನೆಟ್ಟಿದ್ದು 10 ನೇ ಚಾಮರಾಜ ಒಡೆಯರ್ ಹಾಗೂ ದಿವಾನರಾದ ರಂಗಚಾರ್ಲು, ಶೇಷಾದ್ರಿಅಯ್ಯರ್. ಅವರ ಕಾಲದಲ್ಲೇ ಇಂತಹ ನೀರಾವರಿ ಯೋಜನೆಗಳು ಜಾರಿಯಾಗಿವೆ. ಬೋರನಕಣಿವೆ ಜಲಾಶಯದ ದಾಖಲೆಗಳಲ್ಲೂ ಸಹ ಇದು ನೋಡಬಹುದಾಗಿದೆ.
ಕಾರ್ಯಕ್ರಮದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ತುರುವೇಕೆರೆ ಶಾಸಕರಾದ ಮಸಾಲೆಜಯರಾಂ, ಗ್ರಾಪಂ ಅಧ್ಯಕ್ಷರುಗಳಾದ ಕೆಎಂಎಲ್ ಕಿರಣ್, ಕೆ.ಸಿ.ವಿಕಾಸ್, ಗೀತಾಅಜ್ಜಪ್ಪ, ಚೇತನ್, ಉಪಾಧ್ಯಕ್ಷೆ ಶೃತಿಸನತ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್, ನಿರಂಜನ್, ಕೇಶವಮೂರ್ತಿ, ವಸಂತಯ್ಯ, ರಘುವೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.