ತಿಪಟೂರುಸಾಹಿತ್ಯ

ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕು-ಕನ್ನಡ ಆಡಳಿತ ಭಾಷೆಯಾಗಬೇಕು : ಸಮ್ಮೇಳನಾಧ್ಯಕ್ಷ ಆರ್.ಕೆ.ಶಿವಶಂಕರಪ್ಪ

ಗ್ರಾಮೀಣ ಕಲೆಯ ಸೊಗಡಿನೊಂದಿಗೆ ಬೆರೆತ ಕನ್ನಡ ಸಾಹಿತ್ಯ

ತಿಪಟೂರು : ಇಂದಿನ ಸಮಾಜದಲ್ಲಿ ಶಿಕ್ಷಣವೂ ವ್ಯಾಪಾರೀಕರಣವಾಗಿದ್ದು, ಆಂಗ್ಲ ಮಾಧ್ಯಮದ ವ್ಯಾಮೋಹ, ಭ್ರಮೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮಾತೃ ಭಾಷೆಯ ಹೊರತಾದ ಶಿಕ್ಷಣ ಕೊಡಿಸಲು ಮುಂದಾಗಿರುವುದು ದುರಂತದ ಸಂಗತಿ ಎಂದು ಸಮ್ಮೇಳನಾಧ್ಯಕ್ಷ ಹಾಗೂ ಲೇಖಕ ಆರ್.ಕೆ.ಶಿವಶಂಕರಪ್ಪ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಳುವನೆರಲು ಗ್ರಾಮದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊನ್ನವಳ್ಳಿ ಹೋಬಳಿ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಎರಡನೇ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬ ಪೋಷಕರಲ್ಲಿಯೂ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೆ ಮಾತ್ರ ಉಜ್ವಲ ಭವಿಷ್ಯವಿದೆ ಎಂಬ ಪರಿಕಲ್ಪನೆ ಮೂಡಿದ್ದು ಇದರಿಂದ ಹೊರಬರಬೇಕಿದೆ. ಮಗುವಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಕಲಿಕಾ ಆಸಕ್ತಿ ವೃದ್ಧಿಯಾಗುವ ಜೊತೆಗೆ ಕ್ರಿಯಾಶೀಲ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ವೃದ್ಧಿಯಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ವೃದ್ಧಿಸಿದೆ. ಪ್ರತಿಯೊಂದು ಗ್ರಾಮಗಳು ವಯೋವೃದ್ಧ ಕೇಂದ್ರಗಳಾಗಿ ಮಾರ್ಪಾಡಾಗುತ್ತಿದ್ದು, ಇಂದಿನ ಸಂದರ್ಭಕ್ಕೆ ಪ್ರಜ್ಞಾವಂತ ಯುವಜನತೆಯ ಅಗತ್ಯವಿದೆ. ಪ್ರತಿಯೊಂದು ಗ್ರಾಮದಲ್ಲಿಯೂ ಕನ್ನಡ ಪರ ಚಿಂತಕರು, ಸಂಘ-ಸಂಸ್ಥೆಗಳ ರಚನೆ ಅಗತ್ಯವಾಗಿದ್ದು ಕನ್ನಡವನ್ನು ಉಳಿಸಿ ಬೆಳೆಸುವ ಮನಸ್ಥಿತಿ ಮೂಡಬೇಕಿದೆ. ಕನ್ನಡ ಹೆಸರಿಗೆ ಮಾತ್ರ ಆಡಳಿತ ಭಾಷೆಯಾಗದೆ ನಿಜಾರ್ಥದಲ್ಲಿ ಕಾರ್ಯರೂಪಕ್ಕೆ ಬರುವಂತೆ ಕಡ್ಡಾಯಗೊಳಿಸಬೇಕು ಎಂದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ರಾಜ್ಯದಲ್ಲಿ ಕನ್ನಡದ ಶಾಲೆಗಳು ಮುಚ್ಚಿತ್ತಿರುವುದು ಹಣಕಾಸಿಕ ಕೊರತೆಯಿಂದ ಅಲ್ಲ ಬದಲಿಗೆ ಮಕ್ಕಳು ಶಾಲೆಗೆ ಬಾರದಿರುವುದರಿಂದ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯಸರ್ಕಾರ ಸುಮಾರು 1 ಮಗು ಇರುವ 100 ಶಾಲೆಗಳನ್ನು ನಡೆಸುತ್ತಿದ್ದು 3800 ಕ್ಕೂ ಅಧಿಕ ಶಾಲೆಗಳಲ್ಲಿ 5 ಮಕ್ಕಳಿಗೂ ಕಡಿಮೆ ಇರುವ ಶಾಲೆಗಳನ್ನು, 13 ಸಾವಿರ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳು ಇದ್ದರೂ ಇವೆಲ್ಲವನ್ನೂ ಸರ್ಕಾರ ನಡೆಸುತ್ತಾ ಬಂದಿದೆ. ಕನ್ನಡ ಉಳಿಯುವ ಸಲುವಾಗಿಯೇ ಸರ್ಕಾರಿ ಶಾಲೆಗಳನ್ನು ನಡೆಸಲಾಗುತ್ತಿದ್ದು ಮಕ್ಕಳೇ ಬರದಿದ್ದರೆ ಯಾವ ಸರ್ಕಾರಗಳು ಶಾಲೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದರು.

ಬೂದಾಳು ಮಠ, ದೊಡ್ಡಮೇಟಿಕುರ್ಕೆ ಶಶಿಶೇಖರಸಿದ್ಧಬಸವ ಸ್ವಾಮೀಜಿ, ಮಾತಾನಾಡಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಕನ್ನಡ ಭಾಷೆಯನ್ನು ಉಳಿಸುವಂತಹ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಮೂಡಿಸಿಕೊಳ್ಳಬೇಕಿದೆ. ಇಂದಿನ ಯುವಜನಾಂಗಕ್ಕೆ ಕನ್ನಡ ಸಾಹಿತ್ಯದ ಅರಿವನ್ನು ಮೂಡಿಸುವ ಪತ್ರಿಕೆ,ಪುಸ್ತಕಗಳನ್ನು ಓದುವಂತಹ ಹವ್ಯಾಸಗಳನ್ನು ಬೆಳೆಸುವ ಕಾರ್ಯವನ್ನು ಮಾಡುವ ಅಗತ್ಯವಿದೆ. ಮಹಿಳೆಯರಲ್ಲಿ ಇರುವಂತಹ ಸಾಹಿತ್ಯದ ಅಭಿರುಚಿಯನ್ನು ಹೊರತರಲು ಸೂಕ್ತ ವೇದಿಕೆ ಇದಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳಾಗಿ ಎಂದು ಆಶಿಸಿದರು.
ಗ್ರಾಮದ ಗ್ರಾಮದೇವತೆ ಉಡುಸಲಮ್ಮ ದೇವಿ ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮಾಡಲಾಯಿತು. ಮೆರವಣಿಕೆಯಲ್ಲಿ ಗ್ರಾಮೀಣ ಭಾಗದ ಜಾನಪದ ಕಲಾ ತಂಡಗಳಾದ ಕೋಲಾಟ, ಸೋಮನ ಕುಣಿತ, ವೀರಗಾಸೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ತಂಡಗಳ ಕಲಾವಿದರು ಅಮೋಘ ಪ್ರದರ್ಶನ ನೀಡುವ ಮೂಲಕ ಉತ್ಸವಕ್ಕೆ ಮೆರುಗು ತಂದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಸವರಾಜಪ್ಪ, ಬಳುವನೆರಲು ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಅನಂತ ಕುಮಾರ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜ ಶೆಟ್ಟರು, ಸುರಬಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೆ.ಜಿ.ಕೃಷ್ಣಮೂರ್ತಿ, ಬೆಂಗಲೂರಿನ ಬಿ.ಸತ್ಯನಾರಾಯಣ, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಡಿ.ಪರಶುರಾಮನಾಯ್ಕ, ಕಾರ್ಯದರ್ಶಿ ಎಸ್.ಶಂಕರಪ್ಪ, ಎಚ್.ಎಸ್.ಮಂಜಪ್ಪ, ಹೋಬಳಿ ಘಟಕದ ಅಧ್ಯಕ್ಷ ಎನ್.ಚನ್ನಬಸಪ್ಪ, ಶ್ರೀನಿವಾಸ್, ಸಿ.ಎಸ್.ಶಶಿಧರ್, ಸಾರ್ಥವಳ್ಳಿ ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker