ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕ್ಯಾಶವಾರದ ನಾಗರಾಜು ಹೃದಯಾಘಾತದಿಂದ ನಿಧನ
ಕೊರಟಗೆರೆ: ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಭಾಷಣ ಮುಗಿಸಿ ಹಠಾತ್ ಹೃದಯಾಘಾತವಾಗಿ ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.
ಬುಧವಾರದಂದು ಪಟ್ಟಣದ ಸುವರ್ಣಮುಖಿ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಯ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯೂ ಮದ್ಯಾಹ್ನ ೧.೩೦ ಕ್ಕೆ ಶಾಸಕ ಡಾ.ಜಿ.ಪರಮೇಶ್ವರ್ ರವರ ನೇತೃತ್ವದಲ್ಲಿ ಪ್ರಾರಂಭಗೊಂಡಿತು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಸೇರಿದಂತೆ ವಿವಿಧ ಜಿಲ್ಲಾ ಕಾಂಗ್ರೆಸ್ ಪಕ್ಷದ ಘಟಕಗಳ ಅದ್ಯಕ್ಷರುಗಳು, ಸ್ಥಳಿಯ ಮುಖಂಡರು ಮಾತನಾಡಿದರು, ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕ್ಯಾಶವಾರದ ನಾಗರಾಜು (೬೮) ರವರು ನಾನು ಮಾತನಾಡಬೇಕೆಂದು ಮೈಕ್ ಪಡೆದು ಶಾಸಕರ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದರು. ಭಾಷಣ ಮುಗಿಸಿದ ತಕ್ಷಣ ಹೃದಯಾಘಾತವಾಗಿ ಕುಸಿದು ಬಿದ್ದರು.
ವೇದಿಕೆಯಲ್ಲಿ ಭಾಷಣ ಮಾಡಿ ಕುಸಿದುಬಿದ್ದ ನಾಗರಾಜುರವರನ್ನು ಕಂಡು ಅಲ್ಲಿದ್ದವರೆಲ್ಲರೂ ಗಾಬರಿಗೊಂಡು ತಕ್ಷಣ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ನಾಗರಾಜುರವರು ಮೃತಪಟ್ಟಿದ್ದರು.
ಕಾರ್ಯಕ್ರಮವನ್ನು ಅರ್ದಕ್ಕೆ ನಿಲ್ಲಿಸಿದ ಶಾಸಕ ಡಾ.ಜಿಪರಮೇಶ್ವರ ಸರ್ಕಾರಿ ಆಸ್ಪತ್ರೆಗೆ ಬಂದು ನಾಗರಾಜು ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿ, ನಂತರ ಪತ್ರರ್ತರೊಂದಗೆ ಮಾತನಾಡಿ ಈ ಘಟನೆಯೂ ಅತ್ಯಂತ ದು:ಖ ತಂದಿದ್ದು, ನನ್ನ ಎದುರೆ ನಮ್ಮ ಮುಖಂಡರ ಸಾವು ಅತ್ಯಂತ ನೋವುಂಟು ಮಾಡಿದೆ. ಇಂದಿನ ಸಭೆಯನ್ನು ನಿಲ್ಲಿಸಲಾಗಿದ್ದು ಹಾಗೂ ಇಂದು ನಾನು ನಡೆಸಬೇಕಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು, ಸಭೆಗಳನ್ನು ರದ್ದುಗೊಳಿಸಲಾಗಿದೆ, ಕಾಂಗ್ರೆಸ್ ಸಂಸ್ಥಾಪನಾ ದಿನವೇ ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಪಕ್ಷದ ಸಭೆಯಲ್ಲಿ ಕಳೆದುಕೊಂಡಿದ್ದು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಅವರ ಸಾವಿನ ದು:ಖ ಭರಿಸುವ ಶಕ್ತಿ ನೀಡಲಿ ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಅದ್ಯಕ್ಷ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅದ್ಯಕ್ಷ ಲಿಂಗರಾಜು, ಮಾಜಿ ನಗರಸಭಾ ಅದ್ಯಕ್ಷ ವಾಲೆಚಂದ್ರಯ್ಯ, ರಾಜ್ಯ ಎಸ್.ಟಿ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್ ಓಬಳರಾಜು, ಜಿಲ್ಲಾದ್ಯಕ್ಷ ನರಸಿಂಯ್ಯ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅಶ್ವಥ್ ನಾರಾಯಣ, ಅರಕೆರೆ ಶಂಕರ್, ಮಹಿಳಾ ಅದ್ಯಕ್ಷೆ ಜಯಮ್ಮ, ಯುವ ಅದ್ಯಕ್ಷ ವಿನಯ್ ಕುಮಾರ್, ಪ.ಪಂ ಸದಸ್ಯ ನಂದಿಶ್, ಮುಖಂಡರಾದ ಚಿಕ್ಕರಂಗಯ್ಯ, ಜಯರಾಮ್, ಸಿದ್ದಪ್ಪ, ಸುರೇಶ್, ಗೋಪಿನಾಥ್, ದೊಡ್ಡಯ್ಯ ಸೇರಿದಂತೆ ಇತರರು ಹಾಜರಿದ್ದರು.