ಪಂಚರತ್ನ ರಥಯಾತ್ರೆ : ನವವಧುವಿನಂತೆ ಶೃಂಗಾರಗೊಂಡ ತುಮಕೂರು ಗ್ರಾಮಾಂತರ ಕ್ಷೇತ್ರ
ತುಮಕೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಡಿಸೆಂಬರ್ 29 ರಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದು,ಇಡೀ ಕ್ಷೇತ್ರವನ್ನೇ ಶಾಸಕರಾದ ಡಿ.ಸಿ.ಗೌರಿಶಂಕರ್ ನವ ವಧುವಿನಂತೆ ಶೃಂಗರಿ, ಸ್ವಾಗತಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಈ ಯಾತ್ರೆಗೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ 32ನೇಯದ್ದಾಗಿದ್ದು, ಇಡೀ ರಾಜ್ಯದಲ್ಲಿಯೇ ವಿಶೇಷ ಮತ್ತು ವಿಭಿನ್ನವಾಗಿ ರಥಯಾತ್ರೆ ಸ್ವಾಗತಕ್ಕೆ ಸಿದ್ದತೆಗಳನ್ನು ಶಾಸಕರು ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮಾಡಿದ್ದು, ಡ್ರೋನ್, ಪ್ಯಾರಾಗ್ಲೇಡಿಂಗ್, ಕುದುರೆ, 5 ಸಾವಿರ ದ್ವಿಚಕ್ರವಾಹನ, ಐದುನೂರು ಆಟೋ, ಐದುನೂರು ಕಾರುಗಳ ಮೂಲಕ ಅದ್ದೂರಿ ಹಾರ, ತುರಾಯಿಗಳೊಂದಿಗೆ ಇಡಿ ಕ್ಷೇತ್ರದಾದ್ಯಂತ ಸಿದ್ದತೆ ನಡೆದಿದೆ.
ಚಿಕ್ಕನಾಯಕನಹಳ್ಳಿಯಿಂದ ಗುಬ್ಬಿ ಮೂಲಕ ತುಮಕೂರು ಗ್ರಾಮಾಂತರದ ಹೆಗ್ಗರೆಗೆ ಆಗಮಿಸುವ ರಥಯಾತ್ರೆಯನ್ನು ಸ್ವಾಗತಿಸಿ, ಹೆಬ್ಬೂರಿಗೆ ಕರೆ ತರಲಾಗುವುದು. ಹೆಬ್ಬೂರಿನಿಂದ ಆರಂಭವಾಗುವ ರಥಯಾತ್ರೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ಯಾರ ಗ್ಲೆಡಿಂಗ್ ಮೂಲಕ ಸ್ವಾಗತ ಕೋರಲಾಗುವುದು.ಅಲ್ಲದೆ ಡ್ರೋಣ ಯಂತ್ರದ ಮೂಲಕ ಪಕ್ಷದ ಬಣ್ಣಗಳಾದ ಗ್ರೀನ್ ಮತ್ತು ವೈಟ್ ಬಣ್ಣವನ್ನು ಅಕಾಶದಲ್ಲಿ ತೇಲಿ ಬಿಡಲಾಗುವುದು.ಈ ಎಲ್ಲಾ ತಯಾರಿಗಳನ್ನು ಗಮನಿಸಿದರೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆಗೆ ಪಂಚರತ್ನ ರಥಯಾತ್ರೆಯ ಮೂಲಕ ಎರಡು ದಿನ ಮುಂಚಿತವಾಗಿಯೇ ಹೊಸ ವರ್ಷದ ಸಂಭ್ರಮ ಮನೆ ಮಾಡಿದಂತೆ ಕಂಡು ಬರುತ್ತಿದೆ.
ಪಕ್ಷದ ಬಣ್ಣವುಳ್ಳ ಬಲೂನ್‌ಗಳ ಜೊತೆಗೆ,ಪ್ರತಿ ಹೋಬಳಿ ಕೇಂದ್ರದಲ್ಲಿಯೂ ಏರ್ ಬಲೂನ್ ಹಾರಿ ಬಿಡಲಾಗಿದೆ. ಛತ್ರಿಗಳು,ಕುದುರೆಗಳ ಕವಾಯತ್,200ಕ್ಕೂ ಹೆಚ್ಚು ಜಾನಪದ ಕಲಾವಿದರಿಂದ ಪ್ರದರ್ಶನ ನಡೆಯಲಿದ್ದು, ರಾತ್ರಿ ವಾಸ್ತವ್ಯ ಮಾಡುವ ಯಲ್ಲಾಪುರದಲ್ಲಿ ಖ್ಯಾತ ಗಾಯಕಿ ಅನುರಾಧ ಭಟ್ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 25 ಸಾವಿರಕ್ಕೂ ಹೆಚ್ಚು ಜನರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ ಎಂದರು.