ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ : ಡಾ.ಕೆ.ವಿದ್ಯಾಕುಮಾರಿ
ತುಮಕೂರು : ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದಾಗಿದ್ದು, ನಮ್ಮಲ್ಲಿ ನಡೆಯುವಂತಹ ಚುನಾವಣೆಗಳಲ್ಲಿ ಭಾಗವಹಿಸುವ ಮತದಾರರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಆತಂಕದ ಸಂಗತಿ. ಈ ಕುರಿತು ಯುವ ಜನತೆ ಹಾಗೂ ಕಾಲೇಜುಗಳ ಹಂತದಲ್ಲಿ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಅಭಿಪ್ರಾಯಪಟ್ಟರು.
ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾರರ ಸಾಕ್ಷರತಾ ಸಂಘ ಹಾಗೂ ರಾಜ್ಯಶಾಸ್ತç ವಿಭಾಗ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಸಂಬಂಧಿಸಿದಂತಹ ಜಿಲ್ಲಾ ಮಟ್ಟದ ಸ್ವರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲಾಗಿದ್ದು, ಅವುಗಳನ್ನು ಪಾರದರ್ಶಕವಾಗಿ ನಿಸ್ಪಕ್ಷಪಾತವಾಗಿ ನಡೆಸುವ ಜವಾಬ್ದಾರಿ ಭಾರತ ಚುನಾವಣಾ ಆಯೋಗದ ಮೇಲಿದೆ. ಆದರೆ ಚುನಾವಣೆಯಲ್ಲಿ ಭಾಗವಹಿಸುವವ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಚುನಾವಣೆಗಳಲ್ಲಿ ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದರು.
ಯುವ ಸಮೂಹದಲ್ಲಿ ಚುನಾವಣೆ, ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ.ಆರ್.ಲೀಲಾವತಿ ರವರು ಮಾತನಾಡಿ, ಜಿಲ್ಲಾ ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ನಮ್ಮ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಮೂಲಕವಾದರೂ ಐಎಎಸ್ ಅಧಿಕಾರಿಗಳು ನಮ್ಮ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ಲೀಡ್ ಕಾಲೇಜುಗಳ ಸ್ವೀಪ್ ಸಂಚಾಲಕರಾದ ಆರ್.ಮಂಜುನಾಥ್‌ರವರು ಮಾತನಾಡಿ, ಜಿಲ್ಲಾಮಟ್ಟದ ಸ್ಪರ್ಧೆಗೆ ಸಂಬಂಧಿಸಿದಂತೆ ಅಗತ್ಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸ್ವೀಪ್ ಸಹಾಯಕ ನೋಡೆಲ್ ಅಧಿಕಾರಿ ಜಿ.ಆರ್.ಶ್ರೀನಿವಾಸ್, ಪ್ರಬಂಧ ಸ್ಪರ್ಧೆ ಸಂಚಾಲಕರಾದ ಡಾ.ನರಸಿಂಹಮೂರ್ತಿ, ರಸಪ್ರಶ್ನೆ ಸ್ಪರ್ಧೆ ಸಂಚಾಲಕರಾದ ಡಾ.ಯೋಗೀಶ್, ಭಿತ್ತಿಚಿತ್ರ ಪ್ರದರ್ಶನ ಸ್ಪರ್ಧೆಯ ಸಂಚಾಲಕರಾದ ಡಾ.ಜಿ.ಕೆ.ನಾಗರಾಜು, ಡಾ.ಎಂ.ಶಿವಯ್ಯ, ಐಇಸಿ ಸಂಯೋಜಕ ಟಿ.ಕೆ.ವಿನುತ್ ಸೇರಿದಂತೆ ತಾಲ್ಲೂಕು ಮಟ್ಟದ ಸಂಚಾಲಕರುಗಳು ಹಾಜರಿದ್ದರು.