ಸನಾತನ ನೃತ್ಯ ಕಲೆಗಳನ್ನು ಉಳಿಸುವ ಕಾರ್ಯವಾಗಬೇಕಿದೆ : ಡಾ.ಸಂಜಯ್

ತಿಪಟೂರು : ವೈಭವೀಕರಣದ ಕಲೆಗಳ ಭರಾಟೆಯಲ್ಲಿ ನಮ್ಮ ಹಿರಿಯರ ಜನಪದೀಯ ಕಲೆಗಳು ಮಂಕಾಗುತ್ತಿದ್ದು, ಸತ್ವಭರಿತವಾದ ಸನಾತನ ಕಲೆಗಳನ್ನು ಉಳಿಸಿಬೆಳೆಸುವ ಸಲುವಾಗಿ ಯುವಸಮುದಾಯಕ್ಕೆ ಇಂತಹ ನೃತ್ಯಕಲೆಗಳನ್ನು ಪರಿಚಯಿಸಿ ತರಬೇತಿಯನ್ನು ನೀಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ತಿಪಟೂರು ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಸಂಜಯ್ ತಿಳಿಸಿದರು.
ನಗರದ ಕೆ.ಆರ್.ಬಡಾವಣೆಯಲ್ಲಿ ಭಾನುವಾರ ಸಂಜೆ ಶಾಂತಲ ಕೂಚಿಪೂಡಿ ನೃತ್ಯ ಮತ್ತು ಸಂಗೀತ ಶಾಲೆ ವತಿಯಿಂದ ಆಯೋಜಿಸಿದ್ದ ‘ಕನ್ನಡ ನಿತ್ಯೋತ್ಸವ ನಾದ ನೃತ್ಯ ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಕಲೆ, ಸಂಸ್ಕೃತಿಗೆ ತನ್ನದೇ ಆದಂತಹ ಮಹತ್ವವಿದೆ. ದೇಶದಲ್ಲಿ ವಿಭಿನ್ನ ಧರ್ಮ, ಸಮುದಾಯ, ವರ್ಗಗಳಿದ್ದು ಅವುಗಳಿಗೆ ಅನುಗುಣವಾಗಿಯೇ ವೈವಿಧ್ಯಮಯವಾದ ಕಲೆಗಳಿದ್ದು ಪುರಾತನ ಕಾಲದಿಂದಲೂ ನೆಮ್ಮದಿಯ ಜೀವನಕ್ಕಾಗಿ ಹಾಗೂ ಸಂತೋಷಕ್ಕಾಗಿ ಅವುಗಳನ್ನು ಅನುಸರಿಸಿ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಪ್ರಮುಖವಾದ ಕಲೆಗಳಲ್ಲಿ ಕೂಚಿಪುಡಿ ನೃತ್ಯ ಕಲೆಯೂ ಒಂದಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲಾ ಸಮುದಾಯದವರು ವರ್ಗ ಮತ್ತು ಜಾತಿ ಬೇಧವನ್ನು ಮರೆತು ನೃತ್ಯಕಲೆಗಳನ್ನು ತಮ್ಮ ಉಸಿರಾಗಿಸಿಕೊಂಡು ಜೀವನದಲ್ಲಿ ಕರಗತಮಾಡಿಕೊಂಡು ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ಪೂರ್ವಿಕರ ಕಲೆಗಳ ಪರಂಪರೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಕೇವಲ ಹಣಕ್ಕಾಗಿ ಕಲೆಯನ್ನು ಮೈಗೂಡಿಸಿಕೊಳ್ಳದೇ ಮಾನಸಿಕ ಹಾಗೂ ಭೌತಿಕವಾದ ಸದೃಡತೆಗೆ ಹಾಗೂ ಸಮಾಜದಲ್ಲಿ ಕೀರ್ತಿ, ಗೌರರವನ್ನು ಸಂಪಾದಿಸುವುದಕ್ಕಾಗಿ ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಕಲೆಯಲ್ಲಿ ಅಪಾರ ಅನುಭವ, ವಿದ್ವತ್ತನ್ನು ಸಂಪಾದಿಸಿರುವವರು ಕಿರಿಯರಿಗೆ ಉತ್ತಮವಾದ ಮಾರ್ಗದರ್ಶನ ನೀಡುತ್ತಾ ಅವರನ್ನು ಉತ್ತಮ ಕಲಾವಿದರನ್ನಾಗಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೂಚಿಪೂಡಿ ನೃತ್ಯದ ಪ್ರದರ್ಶನ ಹಾಗೂ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಎಚ್.ಪಿ.ಮಹಲಿಂಗಪ್ಪ, ಶಾಲೆಯ ಕಾರ್ಯದರ್ಶಿ ವಿ.ವೇದಾವತಿ, ನಿವೃತ್ತ ಜಿಲ್ಲಾ ದೈಹಿಕ ಅಧೀಕ್ಷಕ ವೆಂಕಟೇಗೌಡ, ಎಲ್.ನಟರಾಜು, ಜಿ.ವಿ.ಶಮಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.