ರಾಜ್ಯ

ವೀರವನಿತೆ ಒನಕೆ ಓಬವ್ವ  ಹೆಸರಿನಲ್ಲಿ ನಿಗಮ ಸ್ಥಾಪನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ವೀರವನಿತೆ ಒನಕೆ ಓಬವ್ವ ಜಯಂತೋತ್ಸವ

ಚಿತ್ರದುರ್ಗ : ಮುಂದಿನ ಬಜೆಟ್‍ನಲ್ಲಿ ವೀರವನಿತೆ ಒನಕೆ ಓಬವ್ವ  ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿ ಮಹಿಳೆಯರ ಹಿತಕ್ಕಾಗಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಓಬವ್ವ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ ಸಂವಿದಾನ ಶಿಲ್ಪಿಡಾ ಬಿ.ಆರ್. ಅಂಬೇಡ್ಕರ್‌ ರಚಿಸಿರುವ ಭಾರತದ ಸಂವಿದಾನದಿಂದ‌ ಎಂದು ತಿಳಿಸಿದರು.
ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದಲ್ಲಿ 100 ಅಂಬೇಡ್ಕರ್ ಹಾಗೂ 50 ಕನಕದಾಸ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದು.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ 224 ವಿಧಾನ ಸಭಾ ಕ್ಷೇತ್ರಗಳಲ್ಲಿಗೂ ಪ್ರತಿ ಕ್ಷೇತ್ರಕ್ಕೆ 100 ಯುವಕರಿಗೆ ಉದ್ಯೋಗಕ್ಕಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಇಂದಿನ ಯುವಕರು ಬುದ್ದ,ಬಸವ ಅಂಬೇಡ್ಕರ್‌ ವಿಬಾರಗಳನ್ನು ಮೈಗೂಡಿಸಿಕೊಂಡು ದೇಶಭಕ್ತರಾಗಿ ಎಂದರು.
 ಛಲವಾದಿ ಸಮುದಾಯದವರು ಸ್ವಾಭಿಮಾನಿ ಬಂಧುಗಳು ಅವರಲ್ಲಿ ಸಾಮರ್ಥ್ಯ ಯಾವುದೇ ಕೊರತೆಯಿಲ್ಲ, ಸಮುದಾಯವನ್ನು ಓಲೈಸಿಕೊಂಡು ಕಾರ್ಯನಿರ್ವಹಿಸಿದರೆ ಛಲವಾದಿ ಸಮುದಾಯ ಯಾರನ್ನು ಸಹ ಕೈ ಬಿಡುವುದಿಲ್ಲ ಎಂದು ಹೇಳಿದರು.
ಚಿತ್ರದುರ್ಗ ನಗರದಲ್ಲಿ 80 ಎಕರೆ ಜಾಗವನ್ನು ಒನಕೆ ಓಬವ್ವ ಟ್ರಸ್ಟ್‌ ಗೆ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮ ವಹಿಸಲಾಗುವುದು. ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲ ಸಮುದಾಯಗಳ ಕೊಡುಗೆ ಅಪಾರವಾಗಿದೆ. ಚಿಕ್ಕಂದಿನಲ್ಲಿ ನನ್ನ ತಾಯಿ ಒನಕೆ ಓಬವ್ವ ಕಥೆ ಹೇಳುತ್ತಿದ್ದರು. ಅಧಿಕಾರ ಇದ್ದವರು ಸಾಧನೆ ಮಾಡುವುದು ಸಹಜ. ಆದರೆ ಅಧಿಕಾರ ಇಲ್ಲದೇ ಒನಕೆ ಓಬವ್ವ ಸಾಧನೆ ಮಾಡಿದ್ದಾಳೆ. ಅವಳ ಹೋರಾಟ ಹಾಗೂ ತ್ಯಾಗ ಸುವರ್ಣಾಕ್ಷರದಲ್ಲಿ ಬರೆಯಬೇಕು. ಗೃಹಿಣಿಯಾಗಿ ಪತಿ ಊಟ ಮಾಡುವಾಗ ಎಬ್ಬಿಸಬಾರದು ಎಂಬ ಸಂಪ್ರದಾಯಕ್ಕೆ ತಲೆಬಾಗಿ, ವೈರಿ ಹೈದರಾಲಿ ಸೇನೆಯನ್ನು ವೀರಾವೇಶದಿಂದ ದಿಟ್ಟವಾಗಿ ಎದುರಿಸಿದಳು ಎಂದರು.
ಓಬವ್ವನ ಕಥೆ ನಮ್ಮೆಲ್ಲರಿಗೂ ಪ್ರೇರಣೆ. ಕಿತ್ತೂರು ಚೆನ್ನಮ್ಮ, ಕೆಳದಿ ಚನ್ನಮ್ಮ, ಉಳ್ಳಾಲದ ಅಬ್ಬಕ್ಕ ನಮಗೆ ಆದರ್ಶಪ್ರಾಯರು. ಮಹಿಳೆಯರ ಸಾಧನೆ ಇತಿಹಾಸ ಪುಟಗಳಲ್ಲಿ ನೋಡಿದರೆ ಮಹಿಳೆಯರು ಅಬಲೆಯರಲ್ಲ ಎಂಬುದು ಸಾಬೀತಾಗುತ್ತದೆ ಎಂದರು. ಓಬವ್ವನಿಂದ ಕರ್ತವ್ಯ ನಿಷ್ಠೆ, ದೇಶಭಕ್ತಿ, ಪ್ರೇಮ ತ್ಯಾಗಗಳ ಗುಣ ಕಲಿಯಬೇಕು. ಈ ಗುಣಗಳು ಛಲವಾದಿ ಸಮುದಾಯದಲ್ಲಿ ಬಹಳ ಹಿಂದಿನಿಂದ ಬೆಳದು ಬಂದಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ನಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ರಚಸಿರುವ “ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ” ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ಜಯಂತಿ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದಿವ್ಯಪ್ರಭು  ಸ್ವಾಗತಿಸಿದರು.  ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಿ.ಎಸ್. ವೀರಯ್ಯ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಛಲವಾದಿ ನಾರಾಯಣಸ್ವಾಮಿ,  ಮಾಜಿ ಸಚಿವೆ ಮೋಟಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಂಟಿ ನಿರ್ದೇಶಕ ಅಶೋಕ ಎನ್. ಛಲವಾದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಹಾಗೂ ಚಿತ್ರದುರ್ಗ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ರಾಜ್ಯದ ನಾನಾ ಭಾಗದ ಛಲವಾದಿ ಸಮುದಾಯದ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker