ಗೃಹರಕ್ಷಕ ದಳದವರನ್ನು ಪೊಲೀಸ್ ಇಲಾಖೆಯ ಹುದ್ದೆಗೆ ನೇಮಕ ಮಾಡಿಕೊಳ್ಳಲಿ : ಶಾಸಕ ವೆಂಕಟರಮಣಪ್ಪ

ಪಾವಗಡ : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಆದ್ಯತೆ ಮೇರೆಗೆ ಪೊಲೀಸ್ ಇಲಾಖೆಯ ಖಾಯಂ ಹುದ್ದೆಗೆ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಶುಕ್ರವಾರ ಪಟ್ಟಣದ ಗುರುಭವನದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ, ಜಿಲ್ಲಾ ಗೃಹರಕ್ಷಕ ದಳ ಸಹಕಾರದೊಂದಿಗೆ ತಾಲೂಕು ಗೃಹರಕ್ಷಕ ದಳ ಘಟಕದಿಂದ ಏರ್ಪಡಿಸಿದ್ದ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೋಲಿಸ್ ಇಲಾಖೆಗೆ ಸದಾ ಕಾನೂನು ಸೇವೆಗಳನ್ನು ಕಾಪಾಡುವಲ್ಲಿ ಗೃಹರಕ್ಷಕದಳದ ಸಿಬ್ಬಂದಿ ಸೇವೆ ಪ್ರಾಮುಖ್ಯವಾಗಿದೆ, ಅವರ ಆತ್ಮಸ್ಥೈರ್ಯ ಹೆಚ್ಚಿಸಲು ಅಸಾಧಾರಣ ಸೇವೆ ಸಲ್ಲಿಸಿ ಪ್ರಶಂಸಾ ಪತ್ರಗಳನ್ನು ಪಡೆದವರನ್ನು ಸರ್ಕಾರ ಪೋಲಿಸ್ ಇಲಾಖೆಗೆ ನೇಮಕ ಮಾಡಿಕೊಂಡರೆ ಅವರ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ ತಿರುಮಣಿಯ ಸೋಲಾರ್ ಘಟಕದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಕೆಲಸ ನೀಡಿದರೆ ಅವರ ಜೀವನೋಪಾಯಕ್ಕೆ ಮಾರ್ಗ ದೊರೆತಂತಾಗುತ್ತದೆ ಎಂದರು.
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಆರ್.ಪಾತಣ್ಣ ಮಾತನಾಡಿ ಗೃಹ ಇಲಾಖೆ ಸಿಬ್ಬಂದಿಯ ಸೇವೆ ಹಾಗೂ ಸರ್ಕಾರ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಎಲ್ಲಾ ವರ್ಗದ ಜನರೂ ಸೇರಿದಂತೆ ಗೃಹರಕ್ಷಕದಳದ ಸಿಬ್ಬಂದಿಗೆ ಸಮಾಜ ಸೇವಕ ಬತ್ತಿನೇನಿ(ನಾನಿ)ನಾಗೇಂದ್ರರಾವ್ ರವರನ್ನು ಜಿಲ್ಲಾ ಮತ್ತು ತಾಲ್ಲೂಕು ಗೃಹರಕ್ಷಕ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿತು.
ಈ ಸಂದರ್ಬದಲ್ಲಿ ಸಮಾಜ ಸೇವಕ ಬತ್ತಿನೇನಿ ನಾನಿ, ನೇರಳೆಕುಂಟೆ ನಾಗೇಂದ್ರ ಕುಮಾರ್, ಗ್ರಾಮಾಂತರ ಸಿಪಿಐ ಕಾಂತರೆಡ್ಡಿ, ಪ್ರಭಾರ ಘಟಕಾಧಿಕಾರಿ ಎಚ್.ರಾಜೇಶ್, ರೊಪ್ಪ ರಾಮಾಂಜಿ, ಮಂಜು, ನವೀನ್, ಸಿಬ್ಬಂದಿ ವರ್ಗ ಹಾಗೂ ಗೃಹರಕ್ಷಕ ಸದಸ್ಯರು ಹಾಜರಿದ್ದರು.