ಕೊಬ್ಬರಿ, ಹಾಲು, ರಾಗಿ, ಅಡಿಕೆಗೆ ವೈಜ್ಞಾನಿಕ ಬೆಲೆ ನೀಡಲು ಒತ್ತಾಯಿಸಿ ಪ್ರತಿಭಟನೆ
ಹುಳಿಯಾರು : ಕೊಬ್ಬರಿ, ಹಾಲು, ರಾಗಿ, ಅಡಿಕೆಗೆ ವೈಜ್ಞಾನಿಕ ಬೆಲೆ ನೀಡುವಂತೆ ಸರಕಾರಕ್ಕೆ ಒತ್ತಾಯಿಸಿ ರೈತಸಂಘ, ಕರವೇ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನಾ ಮೆರವಣಿಗೆ ಮಾಡಿದ ಘಟನೆ ಹುಳಿಯಾರು ಪಟ್ಟಣದಲ್ಲಿ ಗುರುವಾರ ನಡೆದಿದೆ.
ಈ ವೇಳೆ ತಾಲೂಕು ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ ಮಾತನಾಡಿ ಬಾರಿ ಮಳೆಗೆ ಕೊಬ್ಬರಿ ಫಸಲು ಸಹ ಇಲ್ಲದಾಗಿದೆ. ಇರುವ ಕೊಬ್ಬರಿಯ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ. ಕೊಬ್ಬರಿ ನಂಬಿ ಸಾಲಸೂಲ ಮಾಡಿದ ರೈತರು ಮಾಡಿದ ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೆ ಕೊಬ್ಬರಿಗೆ ಕನಿಷ್ಟ 15 ಸಾವಿರ ರೂ. ಬೆಲೆ ನಿಗದಿಪಡಿಸುವಂತೆ. ಹೈನುಗಾರರಿಗೆ ಹಾಲಿಗೆ ಒಂದು ಲೀಟರ್‌ಗೆ 40 ರೂ ನೀಡುವಂತೆ ಹಾಗೂ ಈಗಾಗಲೆ ದರ ಕುಸಿತ ಕಂಡಿರುವ ಅಡಿಕೆಗೆ 50 ಸಾವಿರ ರೂ. ಬೆಲೆ ನಿಗಧಿ ಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್ ಮಾತನಾಡಿ ಇಂದು ರೈತ ಪರ ಎನ್ನುವ ರಾಜಕಾರಣಿಗಳು ಕೊಬ್ಬರಿ ಬೆಲೆ, ಅಡಿಕೆ ಬೆಲೆ, ಹಾಲಿನ ಬೆಲೆ ಕುಸಿದಿದ್ದರೂ ತುಟಿ ಬಿಚ್ಚದೆ ಮೌನಕ್ಕೆ ಜಾರಿದ್ದಾರೆ. ಇನ್ನಾದರೂ ರೈತರ ಕಷ್ಟ ಅರಿತು ಅವರ ನೆರವಿಗೆ ಧಾವಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ರೈತ ವಿರೋಧಿ ರಾಜಕಾರಣಿಗಳೆಲ್ಲರಿಗೂ ತಕ್ಕ ಪಾಠವನ್ನು ರೈತರು ಕಲಿಸುತ್ತಾರೆ ಎಂದು ಎಚ್ಚರಿಸಿದರು. ಒಂದು ಕ್ವಿಂಟಲ್ ಕೊಬ್ಬರಿ ಉತ್ಪಾದನೆಗೆ 25 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಹಾಗಾಗಿ ಸರ್ಕಾರ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆಸತೀಶ್ ಮಾತನಾಡಿ ಮಲೇಶಿಯಾ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರಕಾರ ದೇಶದ ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳುತ್ತಿದೆ. ಇದರಿಂದಲೇ ಇಂದು ಅಡಿಕೆ ಬೆಲೆ ಕುಸಿಯುತ್ತಿದ್ದು ಸರ್ಕಾರ ತಕ್ಷಣ ಆಮದು ನಿಲ್ಲಿಸಬೇಕು. ಹೈನುಗಾರಿಕೆ ನಂಬಿ ಜೀವನ ಸಾಗಿಸಲೆಂದು ರೈತರು ಉಪಕಸುಬಾಗಿ ಹಸು, ಎಮ್ಮೆ ಸಾಕಾಣಿಕೆ ಮಾಡಿಕೊಂಡು ಹಾಲನ್ನು ಡೇರಿಗೆ ಹಾಕುತ್ತಿದ್ದು ಬೇರೆ ರಾಜ್ಯಗಳಿಗೆ ಓಲಿಸಿದರೆ ನಮ್ಮ ರಾಜ್ಯದ ಬೆಲೆ ತೀರ ಕಡಿಮೆ ಇದೆ. ಅಲ್ಲದೆ ಕೊಬ್ಬರಿ ಬೆಲೆ ಕುಸಿದು 3 ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಈಗಲಾದರೂ ಸರ್ಕರ ರೈತರ ಹಿತ ಕಾಯಬೇಕು ಎಂದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಮಲ್ಲಿಕಣ್ಣ, ಲೋಕಣ್ಣ, ಜಯಣ್ಣ, ಶಿವಣ್ಣ, ಸತೀಶ್, ನಾಗರಾಜ್, ಪ್ರಕಾಶ್, ಕರವೇ ಪದಾಧಿಕಾರಿ ಚನ್ನಬಸವಯ್ಯ, ಗುರುನಂಜೇಶ್, ಹಾಗೂ ಮುಖಂಡ ಚಿಕ್ಕಣ್ಣ, ಇಮ್ರಾಜ್ ಸೇರಿದಂತೆ ರೈತ ಮುಖಂಡರುಗಳು ಹಾಜರಿದ್ದರು.