ಹಡವನಹಳ್ಳಿ ಗ್ರಾ.ಪಂ.ಕಾರ್ಯದರ್ಶಿ ನಿಂದಿಸಿದ ಶಾಸಕ ಮಸಾಲಜಯರಾಮ್ ನಡೆಗೆ ಜೆ.ಡಿ.ಎಸ್. ಮುಖಂಡ ಸಿದ್ದಂಗಂಗಯ್ಯ ಖಂಡನೆ
ತುರುವೇಕೆರೆ : ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶಾಸಕ ಮಸಾಲಜಯರಾಮ್ ತಾಲೂಕಿನ ಹಡವನಹಳ್ಳಿ ಗ್ರಾ.ಪಂ. ಕಾರ್ಯದರ್ಶಿ ರವಿಕುಮಾರ್ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ಕ್ರಮವನ್ನು ಗ್ರಾ.ಪಂ. ಸದಸ್ಯ ಹಾಗೂ ಜೆ.ಡಿ.ಎಸ್. ಮುಖಂಡ ಅಮ್ಮಸಂದ್ರಸಿದ್ದಗಂಗಯ್ಯ ಖಂಡಿಸಿದ್ದಾರೆ.
ಪಟ್ಟಣದಲ್ಲಿ ತಾ.ಪಂ, ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಮಸಾಲಜಯರಾಮ್ ಅವರು ಕಾರ್ಯದರ್ಶಿ ರವಿಕುಮಾರ್ ಅವರನ್ನು ಕೆ.ಡಿ.ಪಿ. ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳ ಎದುರಿಗೆ ಕರೆಯಿಸಿ ಹಾರ, ಶಾಲು ಹಾಕಿ ಪೇಟ ತೊಡಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿರುವುದು ಅವರ ಘನತೆಗೆ ತಕ್ಕುದಲ್ಲ. ಕಾರ್ಯದರ್ಶಿ ರವಿಕುಮಾರ್ ತಪ್ಪೆಸಗಿದ್ದರೇ ಅದನ್ನು ತಾ.ಪಂ. ಇ.ಓ. ಒಳಗೊಂಡಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬಹುದಿತ್ತು. ಅಧಿಕಾರಿಗಳ ಎದುರು ಕಾರ್ಯದರ್ಶಿಗೆ ಬೈದು ಮಾನಸಿಕವಾಗಿ ಘಾಸಿಗೊಳಿಸಿದ್ದಾರೆ ಎಂದು ದೂರಿದರು.
ಹಡವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಕಾರ್ಯದರ್ಶಿ ವಿರುದ್ದದ ಆರೋಪವನ್ನೇ ಅಸ್ತçವನ್ನಾಗಿಸಿಕೊಂಡು ಶಾಸಕರು ತೇಜೋವಧೆ ಮಾಡಿರುವುದು ಥರವಲ್ಲ, ಕಾರ್ಯದರ್ಶಿ ರವಿಕುಮಾರ್ ಶಾಸಕರ ಮಾತಿನಿಂದ ಮಾನಸಿಕವಾಗಿ ನೊಂದು ಕೆಟ್ಟ ಆಲೋಚನೆ ಮಾಡಿದರೇ ಅವರನ್ನೇ ನಂಬಿದ್ದ ಕುಟುಂಬದ ಪಾಡೇನು ಎಂದು ಆಲೋಚಿಸಬೇಕಿತ್ತು. ಆಧಾರರಹಿತವಾಗಿ ರವಿಕುಮಾರ್ ವಿರುದ್ದ ಇ.ಓ. ಶಿಸ್ತುಕ್ರಮಕ್ಕೆ ಮುಂದಾದರೆ ತಾ.ಪಂ. ಎದುರು ಪ್ರಗತಿಪರರೊಂದಿಗೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಜಯಲಕ್ಷ್ಮೀರಮೇಶ್, ಪ್ರೇಮಲತಾ ವಾಸುದೇವ್, ಮುಖಂಡರಾದ ಮಂಜು, ಕುಮಾರ್, ದೊಡ್ಡಯ್ಯ, ಶಿವಶಂಕರ್ ಸೇರಿದಂತೆ ಇತರರು ಇದ್ದರು.