ಕುಣಿಗಲ್
ವಿವಿಧ ಸರ್ಕಾರಿ ಇಲಾಖೆಗಳಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಧಿಡೀರ್ ಭೇಟಿ : ದಾಖಲೆಗಳ ಪರಿಶೀಲನೆ
ಕುಣಿಗಲ್ : ತುಮಕೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಸತ್ಯನಾರಾಯಣ್ ವಿವಿಧ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಭಕ್ತರಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಂಗನವಾಡಿ ಶಿಕ್ಷಕಿ ಇರಲಿಲ್ಲ ನಾಲ್ಕು ಮಕ್ಕಳು ಹಾಜರಿದ್ದರು ನಂತರ ಕೊತ್ತಗೆರೆ ನಾಡಕಚೇರಿಗೆ ಭೇಟಿ ನೀಡಿ ಪಿಂಚಣಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದ ಅವರು ಭಕ್ತರಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗುಳಿಗೆಗಳನ್ನು ಪರಿಶೀಲಿಸಿ ನೌಕರರಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದ ಅವರು ಇದೇ ಗ್ರಾಮದ ಪಶು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಶು ವೈದ್ಯರು ಜಾನುವಾರುಗಳನ್ನು ನೋಡಲು ಹೊರಗೆ ಹೋಗಿದ್ದರು ಲೋಕಾಯುಕ್ತ ಅಧಿಕಾರಿಗಳು ಬಂದಿರುವ ಸುದ್ದಿಯನ್ನು ಕೇಳಿ ತಕ್ಷಣ ಪಶು ಆಸ್ಪತ್ರೆಗೆ ಹಿಂದಿರುಗಿದ್ದಾರೆ, ಭಕ್ತರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿ ಊಟ ತಯಾರಿಸುವ ಅಡುಗೆ ಕೋಣೆ ನಂತರ ಶೌಚಾಲಯ ಪರಿಶೀಲಿಸಿ ಶೌಚಾಲಯದಲ್ಲಿ ಶುಚಿತ್ವವನ್ನು ಕಾಪಾಡುವಂತೆ ಮುಖ್ಯ ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.
ಕೊತ್ತಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಾಮಗಾರಿ ಮುಗಿದಿರುವ ಶೌಚಾಲಯ ಪಟ್ಟಿ ಮತ್ತು ಮುಗಿಯಬೇಕಾಗಿರುವ ಶೌಚಾಲಯ ಪಟ್ಟಿಯನ್ನು ದಾಖಲೆಗಳ ಸಮೇತ ಲೋಕಾಯುಕ್ತ ಕಚೇರಿಗೆ ತರಬೇಕೆಂದು ಹಾಜರಿದ್ದ ನೌಕರರಿಗೆ ತಿಳಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಭೇಟಿ ಕೊಟ್ಟ ಕಚೇರಿಗಳಲ್ಲೆಲ್ಲ ಹಾಜರಾತಿ ಪುಸ್ತಕ ಕೆಲವು ದಾಖಲೆಗಳನ್ನು ಪರಿಶೀಲಿಸಿ, ಹಾಜರಿದ್ದ ನೌಕರರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಇದಲ್ಲದೆ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿ ವರ್ಗ ಹಾಜರಿದ್ದರು.