ನಾಮಫಲಕದಲ್ಲಿ ಸಂವಿಧಾನದ ಪೀಠಿಕೆ ಬರಹ : ವಿಶೇಷತೆ ಮೆರೆದ 7ನೇ ವಾರ್ಡಿನ ಸದಸ್ಯ ಜೆ.ಕುಮಾರ್
ತುಮಕೂರು : ತುಮಕೂರು ಮಹಾನಗರಪಾಲಿಕೆಯಿಂದ ನಗರದ 35 ವಾರ್ಡುಗಳಲ್ಲಿಯೂ ನಾಮಫಲಕ ಅಳವಡಿಸುವ ಕಾರ್ಯ ನಡೆಯುತಿದ್ದು,ಎಲ್ಲಾ ವಾರ್ಡುಗಳಲ್ಲಿಯೂ ಅಯಾಯ ವಾರ್ಡಿನ ಸದಸ್ಯರ ಹೆಸರು ಮತ್ತು ಶಾಸಕ ಹೆಸರು ನಾಮಫಲಕದಲ್ಲಿ ಅಳವಡಿಸಿದರೆ, ನಗರದ 7ನೇ ವಾರ್ಡಿನ ಸದಸ್ಯ ಜೆ.ಕುಮಾರ್ ಸಂವಿಧಾನದ ಪ್ರಾಸ್ತಾವನೆಯ ಸಾಲುಗಳನ್ನು ಬರೆಸುವ ಮೂಲಕ ವಿಶೇಷತೆ ಮೆರೆದಿದ್ದಾರೆ.
ಪಾಲಿಕೆಯ ಅನುದಾನದಲ್ಲಿ ಸುಮಾರು 5 ಕೋಟಿ ರೂಗಳ ವೆಚ್ಚದಲ್ಲಿ ನಗರದ 35 ವಾರ್ಡುಗಳ ಪ್ರತಿ ತಿರುವು, ರಸ್ತೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯ ಚಾಲ್ತಿಯಲ್ಲಿದೆ.ಎಲ್ಲಾ ವಾರ್ಡುಗಳಲ್ಲಿಯೂ ಹಾಲಿ ಶಾಸಕರು,ಹಾಲಿ ಪಾಲಿಕೆಯ ಸದಸ್ಯರ ಹೆಸರಿನ ಜೊತೆಗೆ,ಬಡಾವಣೆಯ ಹೆಸರು,ಕ್ರಾಸ್ ಹೆಸರು ನಮೂದಿಸಲಾಗಿದೆ.ಆದರೆ 7ನೇ ವಾರ್ಡಿನಲ್ಲಿ ಮಾತ್ರ. ಶಾಸಕರು ಮತ್ತು ಪಾಲಿಕೆಯ ಸದಸ್ಯರ ಬದಲು ಸಂವಿಧಾನ ಪೀಠಿಕೆಯ ಒಂದೊಂದು ಸಾಲುಗಳನ್ನು ಉಲ್ಲೇಖಿಸುವ ಮೂಲಕ ಬಡಾವಣೆಯ ಜನರಿಗೆ, ಅದರಲ್ಲಿಯೂ ಯುವಕರಿಗೆ ಸಂವಿಧಾನದ ಆಶಯಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಪಾಲಿಕೆ 7ನೇ ವಾರ್ಡಿನ ಸದಸ್ಯ ಜೆ.ಕುಮಾರ್,ಇಂದು ಯುವಜನತೆ ಮಂದಿರ, ಮಸೀದಿ, ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಅನಗತ್ಯ ಚರ್ಚೆಯಲ್ಲಿ ತೊಡಗಿದ್ದಾರೆ.ಯಾವ ವಿಚಾರಗಳು ಯುವಜನರಲ್ಲಿ ಸಾಮರಸ್ಯ,ಬಾತೃತ್ವ, ಸಹೋದರತೆ,ಪ್ರೀತಿ,ಕರುಣೆ ಮೂಡಿಸಬೇಕಾಗಿದ್ದವು, ಅವುಗಳಿಗೆ ಹೊರತಾಗಿ,ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ಮಾಸಿಕ ನೆಮ್ಮದಿಯ ಜೊತೆಗೆ,ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ.ಅಲ್ಲದೆ ರಾಜಕಾರಣಿಗಳು ಇಂದು ಇದ್ದವರು ನಾಳೆ ಇರುವುದಿಲ್ಲ.ಆದರೆ ಸೂರ್ಯಚಂದ್ರರಿರುವವರೆಗು ಬುದ್ದ,ಬಸವ,ಅಂಬೇಡ್ಕರ್ ಅವರ ಹೆಸರುಗಳು ಶಾಶ್ವತವಾಗಿ ಉಳಿಯಬೇಕು.ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ, ಜಾತ್ಯಾತೀತತೆ,ಭಾತೃತ್ವ ಉಳಿಯಬೇಕೆಂಬ ಉದ್ದೇಶದಿಂದ ಯುವಜನರನ್ನು ಗಮನದಲ್ಲಿಟ್ಟುಕೊಂಡು ನಾಮಫಲಕದಲ್ಲಿ ಸಂವಿಧಾನದ ಪೀಠಿಕೆಯನ್ನು ಅಳವಡಿಸಲಾಗಿದೆ.ಈ ದೇಶದ ಐಕ್ಯತೆ ಮತ್ತು ಸಾರ್ವಬೌಮತ್ವವನ್ನು ಎತ್ತಿ ಹಿಡಿಯುವಲ್ಲಿ ನನ್ನ ಸಣ್ಣ ಪ್ರಯತ್ನ ಇದು ಎಂದರು.