
ಗುಬ್ಬಿ: ಕಾಂಗ್ರೆಸ್ ಪಕ್ಷವನ್ನು ಹನ್ನೆರಡು ಸಾವಿರ ಗೂಡು ಎಂದು ಹೇಳಿ ಅಹಿಂದ ವರ್ಗವನ್ನು ಅವಮಾನಿಸಿದ ಗುಬ್ಬಿ ಶಾಸಕ ವಾಸಣ್ಣ ಒಡೆದು ಆಳುವ ನೀತಿ ಬಳಸಿ ವೀರಶೈವ ಲಿಂಗಾಯತ ಸಮುದಾಯದ ವಿರೋಧಿ ಎನಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ನೇರ ಆರೋಪ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹತ್ತು ತಲೆಯ ಮುಖವಾಡದ ಬಿತ್ತಿ ಚಿತ್ರ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಗೂಡು ಕಟ್ಟುವ ಕಾಯಕ ಮಾಡುತ್ತಿದ್ದೇವೆ. ನನಗೆ ಪಕ್ಷಾಂತರ ನಿಲ್ಲಲು ಹೇಳುವ ಅಗತ್ಯವಿಲ್ಲ. ನೀವು ಸ್ವತಂತ್ರ ನಿಂತು ಗೆದ್ದವರು. ಹಾಗಾಗಿ ನೀವೇ ಮತ್ತೊಮ್ಮೆ ಪಕ್ಷೇತರ ನಿಲ್ಲಿ ಎಂದು ಸವಾಲೆಸೆದರು.
ಅಧಿಕಾರದ ದಾಹದಲ್ಲಿ ಪಕ್ಷಾಂತರ ನಿಲುವು ತಾಳಿರುವ ನೀವು ದಕ್ಷತೆ ಮತ್ತು ಬದ್ಧತೆ ಇಲ್ಲದ ರಾಜಕಾರಣಿ ಆಗಿದ್ದೀರಿ. ಪಕ್ಷದ ವರಿಷ್ಠರು, ಹಿರಿಯರನ್ನು ಹೀಯಾಳಿಸಿ ಮಾತನಾಡುವ ಪ್ರವೃತ್ತಿ ಅವರ ತಂದೆ ಸಮಾನರಾದ ಸಂಸದರನ್ನೇ ಬಾಯಿಗೆ ಬಂದಂತೆ ನಿಂದಿಸಿದ್ದು ಎಲ್ಲರಿಗೂ ತಿಳಿದಿದೆ. ಅಧಿಕಾರದ ಆಸೆಗಾಗಿ ಸ್ವಂತಿಕೆ ಇಲ್ಲದ ನೀವು ಗೂಡು ಹುಡುಕುತ್ತಿದ್ದೀರಿ ತಾಕತ್ತು ಬಗ್ಗೆ ಸದಾ ಮಾತನಾಡುವ ನೀವು ಹಣ ಹೆಂಡ ಹಂಚದೆ ಚುನಾವಣೆ ನಡೆಸಲು ನೀವು ಮಣ್ಣಮ್ಮ ದೇವಸ್ಥಾನಕ್ಕೆ ಬನ್ನಿ ಪ್ರಮಾಣ ಮಾಡಿ ಯಾವುದೇ ಆಮಿಷೆಯೊಡ್ಡದೆ ಚುನಾವಣೆ ನಡೆಸಲು ಸಿದ್ದರೆಂದು ತಿಳಿಸಿ ನಂತರ ಯಾರಿಗೆ ಮತ ಹೆಚ್ಚು ಬೀಳುತ್ತದೆ ನೋಡಿ ಎಂದು ಸವಾಲೆಸೆದು ಇಂತಹವರನ್ನು ಕರೆ ತರಲು ಮುಂದಾದ ಕೆ ಎನ್ ಆರ್ ಯೋಚಿಸಬೇಕಿದೆ. ಎಲ್ಲಾ ವಿಷಯದಲ್ಲಿ ಒಪ್ಪುವ ನಾನು ಗುಬ್ಬಿ ವಿಚಾರದಲ್ಲಿ ಅವರ ನಡೆ ಸರಿಯಿಲ್ಲ ಎಂದರು.
ಕಳೆದ 20 ವರ್ಷದ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಲು ನಿಮ್ಮದೂ ಯಾವ ವರ್ಚಸ್ಸು ಕೆಲಸ ಮಾಡಿಲ್ಲ. ಅಂದಿನ ಬದಲಾವಣೆ ಅಲೆ ನಿಮ್ಮನ್ನು ಕರೆದೊಯ್ದಿದೆ. ಅದೇ ಸಂದರ್ಭದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವುದು ಕಷ್ಟ ಎಂದು ತಿಳಿದು ಜೆಡಿಎಸ್ ನತ್ತ ಹೋಗಿದ್ದೀರಿ. ಅಲ್ಲೇ 20 ವರ್ಷ ಅಧಿಕಾರ ಬಳಸಿ ಈಗ ಮಾತೃ ಪಕ್ಷವನ್ನೇ ತೆಗಳಿ ಈಗ ಕಾಂಗ್ರೆಸ್ ಪಕ್ಷಕ್ಕೆ ಬರುವ ಮುನ್ನವೇ ಕಾಂಗ್ರೆಸ್ ನ್ನೇ ಹೀಯಾಳಿಸುತ್ತಿರುವುದು ಎಲ್ಲರೂ ಆಲೋಚಿಸಬೇಕಿದೆ. ಯಾವ ರೀತಿ ಅಧಿಕಾರ ಉಪಯೋಗಿಸಿ ಹಣ ಮಾಡಿರುವ ಬಗ್ಗೆ ಅವರೇ ತಮ್ಮ ಪುತ್ರನ ಸಿನಿಮಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇಪ್ಪತ್ತು ಮೂವತ್ತು ಕೋಟಿ ನನಗೇನೂ ಲೆಕ್ಕವಿಲ್ಲ ಎನ್ನುತ್ತಾರೆ. ಇದೇ ಅವರ ಅಭಿವೃದ್ದಿ ಎಂಬುದು ಜನತೆಗೆ ತಿಳಿದಿದೆ ಎಂದ ಅವರು ಸ್ವಂತ ಶಕ್ತಿ ಬಗ್ಗೆ ಮಾತನಾಡುವ ನೀವು ಕಳೆದ ಜಿಪಂ ಚುನಾವಣೆ ಯಾಕೆ ಕಳೆದುಕೊಂಡಿರಿ ಎಂದು ಪ್ರಶ್ನಿಸಿದರು.
ಮುಖಂಡ ಹೊನ್ನಗಿರಿಗೌಡ ಮಾತನಾಡಿ ಸೋಲುವ ಭೀತಿಯಲ್ಲಿ ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಿದರು. ಮುದ್ದಹನುಮೇಗೌಡ ಅವರ ಮೂಲಕ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿಯಲ್ಲಿ ಸ್ವತಂತ್ರ ಅಭ್ಯರ್ಥಿ ಸೃಷ್ಠಿಸಿ ಲಿಂಗಾಯಿತ ಮತಗಳ ವಿಭಜನೆ ಹೀಗೆ ಕುತಂತ್ರ ಮಾಡಿ ಚುನಾವಣೆಯಲ್ಲಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ತಂತ್ರ ಮಾಡಿದ ಶಾಸಕರು ಈ ಬಾರಿ ಕಾಂಗ್ರೆಸ್ ಗೆಲವು ಅರಿತು ಇತ್ತ ಬರುತ್ತಿದ್ದಾರೆ. ಮೊದಲಿನಿಂದ ಪಕ್ಷ ಸಂಘಟನೆ ಮಾಡಿದ ನಮ್ಮವರಲ್ಲಿರುವವರಿಗೆ ಟಿಕೆಟ್ ನೀಡಿ. ವಲಸೆ ಅಭ್ಯರ್ಥಿ ತರುವುದಾದರೆ ನಾನು ಸಹ ಈ ಬಾರಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗುವೆ ಎಂದು ಹೈಕಮಾಂಡ್ ಗೆ ನೇರ ಎಚ್ಚರಿಕೆ ನೀಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಕ್ಕೆ ಮತ ನೀಡಿ ಮಾತೃ ಪಕ್ಷ ದೂರ ಮಾಡಿ ವರಿಷ್ಠರ ಬಗ್ಗೆ ಸಲ್ಲದ ಮಾತು ಆಡಿರುವ ಶಾಸಕರು ಈ ಕ್ಷಣ ರಾಜೀನಾಮೆ ಕೊಟ್ಟು ಕ್ಷೇತ್ರದಲ್ಲಿ ಓಡಾಡಲಿ. ಕೇವಲ ಅಧಿಕಾರ ಬಳಸಿ ಸುಳ್ಳು ಗುದ್ದಲಿ ಪೂಜೆ ನೆರವೇರಿಸುತ್ತಿರುವ ಬಗ್ಗೆ ಜನರೇ ಪ್ರಶ್ನಿಸುತ್ತಾರೆ ಎಂದ ಅವರು ಮಾಧ್ಯಮದವರನ್ನು ಬೆದರಿಸುವ ಗೂಂಡಾ ಸಂಸ್ಕೃತಿ ಇರುವ ಬಗ್ಗೆ ಯಾರೋ ಮಾತನಾಡುವಂತಿಲ್ಲ. ಪೊಲೀಸ್ ಬಳಸಿ ಕೇಸ್ ದಾಖಲು ಹಾಕುವ ದೌರ್ಜನ್ಯ ಮಾಡುವ ಇವರನ್ನು ಕಾಂಗ್ರೆಸ್ ಬಿಜೆಪಿ ಇಬ್ಬರೂ ಆಹ್ವಾನಿಸುತ್ತಾರೆ ಎನ್ನುತ್ತಾರೆ. ಗುಬ್ಬಿ ಶಾಸಕರು ರಾತ್ರಿ ವೇಳೆ ಯಾವ ಲೀಡರ್ ಗಳ ಮನೆ ಬಾಗಿಲಿಗೆ ಹೋಗುವ ಬಗ್ಗೆ ತಿಳಿದಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಗುಬ್ಬಿ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಟಿ.ಆರ್.ಚಿಕ್ಕರಂಗಯ್ಯ, ಎಂ.ವಿ.ಶ್ರೀನಿವಾಸ್, ಪಪಂ ಸದಸ್ಯ ಸಾದಿಕ್, ಸಲೀಂಪಾಷ, ಸೇವಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಕಡಬ ಶಿವಕುಮಾರ್, ಶಿವಾನಂದ್, ರಂಗನಾಥ್, ಸೌಭಾಗ್ಯಮ್ಮ, ಜಯಣ್ಣ, ಜಿ.ಎಸ್.ಮಂಜುನಾಥ್ ಇತರರು ಇದ್ದರು.