ಪೂನಂ ಆಂಗ್ಲ ಮಾಧ್ಯಮ ಶಾಲೆಯಿಂದ ಕಲೋತ್ಸವ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತನ್ನು ರೂಡಿಸಿಕೊಳ್ಳಿ : ಡಾ.ಸಿ.ಎಂ.ರಾಜೇಶ್ ಗೌಡ

ಶಿರಾ : ಯಾವುದೇ ವಿದ್ಯಾರ್ಥಿ ಉತ್ತಮ ಬದುಕನ್ನು ಕಂಡುಕೊಳ್ಳಬೇಕಾದಲ್ಲಿ ಶಿಕ್ಷಣದ ಜೊತೆಗೆ ಶಿಸ್ತನ್ನು, ಸಂಸ್ಕಾರವನ್ನು ಸಹ ರೂಡಿಸಿಕೊಳ್ಳಬೇಕಿದೆ. ಉತ್ತಮ ಶಿಸ್ತಿನಿಂದ ವರ್ತಿಸಿದರೆ ಅವನು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.
ಅವರು ನಗರದ ಶ್ರೀ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಪೂನಂ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಿದ್ದ ಕಲೋತ್ಸವ 2022-23ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಗುವಿನ ಶೈಕ್ಷಣಿಕ ಪ್ರಗತಿಗೆ ಕೇವಲ ಶಿಕ್ಷಕರು ಮಾತ್ರ ಶ್ರಮ ವಹಿಸಿದರೆ ಸಾಲದು. ಶಿಕ್ಷಕರ ಜೊತೆಗೆ ಪಾಲಕರು ಸಹ ಕೈಜೋಡಿಸಿದಾಗ ಮಾತ್ರ ಮಗು ಕಲಿಕೆಯಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಮಗುವಿನ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಪೋಷಕರು ನಿರಂತರವಾಗಿ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪೋಷಕರಿಗೆ ತಿಳಿಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಬಿ.ಗೋವಿಂದಪ್ಪ ಮಾತನಾಡಿ ಅತಿ ಕಡಿಮೆ ವೆಚ್ಚದಲ್ಲಿ ಬಡವರ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯಬೇಕೆಂಬುದು ನನ್ನ ಗುರಿಯಾಗಿತ್ತು. ಆ ಕಾರಣಕ್ಕಾಗಿಯೇ ನಾನು ನಿವೃತ್ತಿಯ ನಂತರ ಶಾಲೆಯನ್ನು ತೆರೆದು ಗುಣಮಟ್ಟದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಬಡ ಮಕ್ಕಳಿಗೆ ನೀಡುತ್ತಿದ್ದೇನೆ. ವಿದ್ಯೆಯು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಾಲ ಪ್ರತಿಭೆ ಡ್ಯಾನ್ಸ್ ವರ್ಲ್ಡ್ ಕಪ್ 2022ರ ವಿಜೇತೆ ಸಮನ್ವಿ ಸಂತೋಷ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರೊಫೆಸರ್ ಗೀತ ನಾಯ್ಡು, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸಿ÷್ಟಟ್ಯೂಶನ್ಸ ಚೇರ್ಮನ್ ಸಿ.ಎಸ್. ರಶ್ಮಿ ರವಿಕಿರಣ್, ಸಾಯಿ ಇನ್ಸಿ÷್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ನ ಮಧುಸೂಧನ, ಪ್ರೊಫೆಸರ್ ಡಾ.ಸಿ.ವೆಂಕಟೇಶಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ರವಿಕುಮಾರ್, ತೆಷ್ರಾ ಗ್ರೂಪ್ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಆರ್. ತೇಜಸ್ ಕಿರಣ್, ಪ್ರೊ. ಡಾ. ರಾಜಣ್ಣ, ಪೂನಂ ಸಂಸ್ಥೆಯ ಕಾರ್ಯದರ್ಶಿ ರತ್ನಗೋವಿಂದ್, ಸ್ವಾಮಿ ದರ್ಶನ್, ಮುಖ್ಯೋಪಾಧ್ಯಾಯ ಗ್ರೇಶಿಯನ್ ಡಿಸೋಜ ಸೇರಿದಂತೆ ಹಲವರು ಹಾಜರಿದ್ದರು.