ಸರ್ಕಾರ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಲಿ : ಕೋಟೇಶ್
ಬರಗೂರಿನ ಅಂಬೇಡ್ಕರ್ ಭವನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಸಭೆ
ಶಿರಾ : ಅತಿಥಿ ಶಿಕ್ಷಕರು ತಮ್ಮ ಸೇವಾ ಭದ್ರತೆ, ಕೃಪಾಂಕ, ಮತ್ತು ಇನ್ನಿತರ ಅನೇಕ ಬೇಡಿಕೆಗಳನ್ನು ಸರ್ಕಾರವನ್ನು ಕೇಳಿ ಪಡೆಯುವಂತಹ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಹೋರಾಟವಿಲ್ಲದೆ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಹಾಗಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಕೋಟೆಶ್ ಹೇಳಿದರು.
ಅವರು ತಾಲೂಕಿನ ಬರಗೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆದ ಮಧುಗಿರಿ ಶೈಕ್ಷಣಿಕ ಜಿಲ್ಲಾ ಹಂತದ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅತಿಥಿ ಶಿಕ್ಷಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಶಿವಮೊಗ್ಗದಿಂದ ಇಲ್ಲಿಯವರೆಗೆ ಸುಮಾರು ಹತ್ತು ಜಿಲ್ಲೆಗಳನ್ನು ತಲುಪಿ ಅನೇಕ ತಾಲೂಕುಗಳಿಗೆ ಭೇಟಿ ನೀಡಿ ಸಂಘಟನೆ ರೂಪಗೊಳ್ಳುವಂತೆ ಅತಿಥಿ ಶಿಕ್ಷಕರನ್ನು ಪ್ರೇರೇಪಿಸಲಾಗುತ್ತಿದೆ ಹಾಗೂ ಅತಿಥಿ ಶಿಕ್ಷಕರ ಮುಂಬರುವ ಅಧಿವೇಶನದ ವೇಳೆಗೆ ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ರೂಪಿಸುವ ಯೋಜನೆಯನ್ನು ಕೈಗೊಂಡಿದ್ದೇವೆ ಹಾಗಾಗಿ ನಾವೆಲ್ಲರೂ ಒಟ್ಟಾಗಿ ಕೊಡಿ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಭೂತರಾಜು ಮಾತನಾಡಿ ಸುಮಾರು ಎಂಟು ಹತ್ತು ವರ್ಷಗಳಿಂದ ಅನೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಈವರೆಗೆ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಸೇವಾ ಭದ್ರತೆಯಾಗಲಿ ಕೃಪಾಂಕವಾಗಲಿ ತಾನಾಗಿ ಬರುವಂತದ್ದಲ್ಲ ಮುಂಬರುವ ಚುನಾವಣೆಯ ಮುಂಚಿತವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟವನ್ನು ರೂಪಿಸೋಣ ಹಾಗೂ ಒಂದು ಕುರಿ ಸತ್ತರೆ ಶಾಸಕರಿಗೆ ಅಥವಾ ಜನಪ್ರತಿನಿಧಿಗಳಿಗೆ ತಿಳಿಯುವ ವಿಚಾರ ಒಬ್ಬ ಅತಿಥಿ ಶಿಕ್ಷಕ ಮರಣ ಹೊಂದಿದರು ಅದರ ವಿಚಾರಗಳು ಅವರ ಕಿವಿಗಳಿಗೆ ಬಿಳದಂತೆ ಇರುವುದು ಬಹಳ ಬೇಸರದ ಸಂಗತಿ ಇತ್ತೀಚಿಗೆಷ್ಟೇ ಹೃದಯಘಾತದಿಂದ ಮರಣ ಹೊಂದಿದ ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಗಂಡಿಹಳ್ಳಿ ಗ್ರಾಮದ ಅತಿಥಿ ಶಿಕ್ಷಕರಾದ ತಿಪ್ಪೇಸ್ವಾಮಿಯವರ ಕುಟುಂಬಕ್ಕೆ ಯಾವುದೇ ಪರಿಹಾರವಾಗಲಿ ಸಾಂತ್ವಾನದ ಮಾತುಗಳನ್ನು ಆಗಲಿ ಇಲ್ಲಿನ ಜನಪ್ರತಿನಿಧಿಗಳು ಸ್ಥಳೀಯ ಜನಪ್ರತಿನಿಧಿಗಳು ಪ್ರತಿಕ್ರಿಯೆ ಇಲ್ಲ ಇದು ಅತಿಥಿ ಶಿಕ್ಷಕರ ಜೀವನದ ಪರಿಸ್ಥಿತಿ ಹೀಗಿರುವಾಗ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡುವುದು ಅತ್ಯಗತ್ಯ ಎಂದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನ ಆಚರಿಸಿ ಪುಷ್ಪಾರ್ಚನೆಯ ಮೂಲಕ ನಮನವನ್ನು ಸಲ್ಲಿಸಲಾಯಿತು. ಸಭೆಯಲ್ಲಿ ರಾಜ್ಯ ಸಮಿತಿಯ ಸಂಘಟಕರಾದ ಮೊಹಮ್ಮದ್ ಜಾಫರ್, ಶೀಜಾ, ಅತಿಥಿ ಶಿಕ್ಷಕರಾದ ಶಿವಣ್ಣ, ಶಿವಣ್ಣ ದ್ವಾರನ ಕುಂಟೆ, ಸಿದ್ದಣ್ಣ, ಗಿರೀಶ್, ಆಶಾ, ಜಯಶ್ರೀ, ಚೈತನ್ಯ, ಶಶಿಕುಮಾರ್, ನಾಗಭೂಷಣ್, ರಮೇಶ್, ಹನುಮಂತರಾಜು, ಅರುಣ್ ಸೇರಿದಂತೆ ಹಲವರು ಹಾಜರಿದ್ದರು.