ತುಮಕೂರು : ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಕರ್ನಾಟಕವನ್ನು ಆರೋಗ್ಯ ಕರ್ನಾಟಕವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರು ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಕರೆ ನೀಡಿದರು.
ಶ್ರೀಮಂತರು ಹಣ ಕೊಟ್ಟು ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಸಮಾಜದ ಒಳಿತಿಗೆ ಬಡವರ ಪ್ರಾರ್ಥನೆ ಸಲ್ಲುತ್ತದೆ. ಇಂತಹ ಬಡವರಿಗಾಗಿ ಉಚಿತ ಆರೋಗ್ಯ ಸೇವೆ ನೀಡಲು ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ವೈದ್ಯರು ಮತ್ತು ಆಡಳಿತ ಮಂಡಳಿಯವರು ಸಂಕಲ್ಪ ಮಾಡಬೇಕು ಎಂದರು.
ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಯಣವಾಗಿರುವ ನಾರಾಯಣ ದೇವಾಲಯ ಉಚಿತ ನೇತ್ರ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ವಿನೂತನವಾದ ಅತ್ಯಂತ ಸುವ್ಯವಸ್ಥಿತವಾದ ಆಸ್ಪತ್ರೆಯಾಗಿದ್ದು, ನಾರಾಯಣ ನೇತ್ರಾಲಯದ ನೇತೃತ್ವದಲ್ಲಿ ಸಂಪೂರ್ಣವಾಗಿ ಬಡವರಿಗೆ ಒಂದು ನಯಾ ಪೈಸೆಯನ್ನು ಪಡೆಯದೆ ನೇತ್ರ ದೋಷ ನಿವಾರಣೆ ಸಂಕಲ್ಪ ಮಾಡಿರುವ ರಾಜ್ಯದಲ್ಲೇ ಮೊದಲನೆಯ ಆಸ್ಪತ್ರೆಯಾಗಿದೆ ಎಂದು ಶ್ಲಾಘಿಸಿದರು.
ಬಹುತೇಕ ಆಸ್ಪತ್ರೆಗಳು ರಿಯಾಯ್ತಿ ದರದಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡುತ್ತಿವೆ. ಆದರೆ ನಾರಾಯಣ ನೇತ್ರಾಲಯದವರು ಹಣ ಪಾವತಿ ಕೌಂಟರ್ ಇಲ್ಲದೇ ಬಡವರಿಗೆ ಉಚಿತವಾಗಿ ಕಣ್ಣಿನ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ವೈದ್ಯಕೀಯ ಲೋಕಕ್ಕೆ ಸ್ಫೂರ್ತಿಯಾಗಿದೆ. ಇದೊಂದು ಪುಣ್ಯದ ಕೆಲಸ ಎಂದರು.
ಬಡತನವೂ ಕೂಡ ನೇತ್ರ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬಡವರಿಗೆ ನೇತ್ರ ದೋಷವನ್ನು ನಿವಾರಣೆ ಮಾಡುವ ಕೆಲಸವನ್ನು ಡಾ. ಭುಜಂಗಶೆಟ್ಟಿಯವರು ಮಾಡುತ್ತಿದ್ದಾರೆ. ಇವರ ಆಸ್ಪತ್ರೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ ಮಾಡಿ ಅಗತ್ಯ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮ ಬಜೆಟ್‌ನಲ್ಲೇ ಘೋಷಿಸಿದ್ದೆ. ಈ ಕಾರ್ಯಕ್ರಮ ಜನವರಿಗೆ ಜಾರಿಗೆ ಬರಲಿದೆ ಎಂದರು.
ದೇವರ ಸೃಷ್ಠಿಯಲ್ಲಿ ಹೃದಯದ ನಂತರ ಕಣ್ಣು ಪ್ರಮುಖವಾದ ಅಂಗ. ಕಣ್ಣಿನಿಂದ ಇಡೀ ಜಗತ್ತನ್ನು ನೋಡಬಹುದು. ಕಣ್ಣು ಇಲ್ಲದಿದ್ದರೂ ಇಡೀ ಪ್ರಪಂಚವೇ ಕತ್ತಲಾಗುತ್ತದೆ. ಕಣ್ಣಿನಿಂದ ನೋಡುವುದಷ್ಟೇ ಇಲ್ಲ, ಜ್ಞಾನವೂ ಪ್ರಾಪ್ತಿಯಾಗುತ್ತದೆ ಎಂದು ಅವರು ತಿಳಿಸಿದರು.
ಶಿಕ್ಷಣ ಇಲ್ಲದಿದ್ದರೆ ಸಂಸ್ಕಾರ, ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತಿರಲಿಲ್ಲ. ಶಿಕ್ಷಣ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕಣ್ಣು ಬಹಳ ಅಗತ್ಯ. ಇಂತಹ ಕಣ್ಣಿನ ಆರೋಗ್ಯ ಸೇವೆ ಮಾಡುತ್ತಿರುವ ನಾರಾಯಣ ನೇತ್ರಾಲಯದ ಕರ್ನಾಟಕದಲ್ಲೇ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ ಎಂದರು.
ಭಗವಂತ ಎಲ್ಲರಿಗೂ ಶ್ರೀಮಂತಿಕೆ ಕೊಟ್ಟಿರುವುದಿಲ್ಲ. ಶ್ರೀಮಂತಿಕೆ ಹೊಂದಿರುವವರಿಗೆ ಎಲ್ಲವೂ ಸೇರಿದ್ದಲ್ಲ. ಎಲ್ಲವೂ ಸೃಷ್ಠಿಗೆ ಸೇರಿದ್ದು. ಇದನ್ನು ಉಳ್ಳವರು ಅರ್ಥ ಮಾಡಿಕೊಂಡು ಬಡವರ ಸೇವೆಗೆ ಮುಂದಾಗಬೇಕು ಎಂದು ಅವರು ಪುನರುಚ್ಚರಿಸಿದರು.
ಫಿಲಾಸಫಿ ಎಂದರೆ ಪಾಪ ಪುಣ್ಯ, ಎಕನಾಮಿಕಲ್ ಎಂದರೆ ಲಾಭ-ನಷ್ಟ ಎಂಬುದನ್ನು ನಾನು ನೋಡಿದ್ದೇನೆ. ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ. ಡಾ. ಭುಜಂಗಶೆಟ್ಟಿಯವರು ಆಸ್ಪತ್ರೆಯನ್ನು ಕಟ್ಟಿ ತಮ್ಮ ದುಡಿದ ಒಂದು ಭಾಗವನ್ನು ಬಡವರ ಆರೋಗ್ಯ ಸೇವೆಗೆ ವಿನಿಯೋಗಿಸುತ್ತಿರುವುದು ಪರೋಪಕಾರಕ್ಕೆ ಮಾದರಿಯಾಗಿದೆ ಎಂದರು.
ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.
ಕರ್ನಾಟಕವನ್ನು ನೇತ್ರ ದೋಷ ಮುಕ್ತವನ್ನಾಗಿ ಮಾಡಬೇಕು ಎಂಬ ಹಂಬಲ ತಮ್ಮದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಉಚಿತ ಚಿಕಿತ್ಸಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಇದು ಆಸ್ಪತ್ರೆಯಲ್ಲ, ಕಣ್ಣಿನ ದೇವಾಲಯ ಎಂದು ಬಣ್ಣಿಸಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಹೃದಯಷ್ಟೇ ಕಣ್ಣು ಸಹ ಮುಖ್ಯ. ಇಂತಹ ಕಣ್ಣಿನ ಆರೋಗ್ಯ ಸೇವೆ ಮಾಡುತ್ತಿರುವ ಡಾ. ಭುಜಂಗಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.
ಕಣ್ಣಿನ ಆರೋಗ್ಯ ಸೇವೆಯಲ್ಲಿ ಬಹುದೊಡ್ಡ ಸೇವೆಯನ್ನು ಡಾ. ಎಂ.ಸಿ. ಮೋದಿಯವರು ಮಾಡಿದ್ದಾರೆ. ಅವರ ಹಾದಿಯಲ್ಲೆ ಡಾ. ಭುಜಂಗಶೆಟ್ಟಿಯವರು ಸಾಗುತ್ತಿದ್ದು, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬಡವರಿಗೆ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ತೆರೆದಿದ್ದಾರೆ. ಇದು ತುಮಕೂರು ಜಿಲ್ಲೆಯ ಬಡ ಜನರಿಗೆ ವರದಾನವಾಗಿದೆ ಎಂದರು.
ಸಮಾರಂಭದಲ್ಲಿ ಸಚಿವರುಗಳಾದ ಗೋವಿಂದ ಕಾರಜೋಳ, ಬಿ.ಸಿ. ನಾಗೇಶ್, ಶಾಸಕರಾದ ಡಾ. ರಾಜೇಶ್‌ಗೌಡ, ಜ್ಯೋತಿಗಣೇಶ್, ಡಾ. ಭುಜಂಗಶೆಟ್ಟಿ, ಡಾ. ನರೇಶ್ ಶೆಟ್ಟಿ, ಡಾ. ರೋಹಿತ್ ಶೆಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.