ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ : ಆತೀಕ್ ಅಹಮದ್
ತುಮಕೂರು : ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವ ಪರಿಕಲ್ಪನೆಯ ಮೂಲಕ ಇಡೀ ದೇಶದ ಜನರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದ್ದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ತಿಳಿಸಿದ್ದಾರೆ.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಸ್ವಾತಂತ್ರ ನಂತರದಲ್ಲಿ ಕೆಲವೇ ಮಂದಿಗೆ ಸಿಮೀತವಾಗಿದ್ದ ಮತದಾನದ ಹಕ್ಕನ್ನು, ಬಡವ,ಬಲ್ಲಿದ,ಲಿಂಗಭೇಧ ತಾರತಮ್ಯವಿಲ್ಲದೆ ಎಲ್ಲರಿಗೂ ದೊರೆಯುವಂತೆ ಮಾಡಿದವರು ಬಾಬಾಸಾಹೇಬ್ ಅಂಬೇಡ್ಕರ್. ಅವರನ್ನು ಇಂದು ಇಡೀ ವಿಶ್ವವೇ ಸ್ಮರಿಸುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಮಾತನಾಡಿ,ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳ ಜೊತೆಗೆ, ಕರ್ತವ್ಯವನ್ನು ನೀಡಿ, ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲದೆ ಬದುಕುವಂತಹ ಸಂವಿಧಾನ ಬದ್ದ ಹಕ್ಕು ನೀಡಿದ್ದು ಡಾ.ಬಿ.ಆರ್.ಅಂಬೇಡ್ಕರ್,ಅಂತಹ ವ್ಯಕ್ತಿಯನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದರ ಜೊತೆಗೆ,ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಅವರ ದಾರಿಯಲ್ಲಿ ನಡೆಯುವ ಮೂಲಕ ದೇಶದ ಪ್ರಗತಿಯಲ್ಲಿ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ಬಾಬಾ ಸಾಹೇಬರು ಒಂದು ಜಾತಿಗೆ ಸಿಮೀತವಾಗಿ ಸಂವಿಧಾನವನ್ನು ಬರೆದಿಲ್ಲ.ಇಡೀ ದೇಶದ ಎಲ್ಲ ವರ್ಗಗಳ ಹಿತವನ್ನು ಕಾಪಾಡುವ ಅಂಶವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ.ಈ ಮೊದಲು ಅಂಬೇಡ್ಕರ್ ಎಂದರೆ ಮೂಗು ಮುರಿಯುತ್ತಿದ್ದ ಜನರು,ಇಂದು ಓಟಿಗಾಗಿ ವಿಧಿಯಿಲ್ಲದೆ ಇಂದು ಅಂಬೇಡ್ಕರ್ ಫೋಟೋ ಹಿಡಿದು ಓಡಾಡುತ್ತಿದ್ದಾರೆ.ಸಂವಿಧಾನ ಬದಲಾಯಿಸಲೇ ಬಂದಿದ್ದೇವೆ ಎಂದು ಹೇಳುತಿದ್ದ ನಾಯಕರ ಉಸಿರು ನಿಂತು ಹೋಗಿದೆ.ನಿಜವಾಗಿಯೂ ಇವರು ದೇಶದ ಜನರಿಗೆ ಅನುಕೂಲ ಮಾಡಿದ್ದರೇ ಅಂಬೇಡ್ಕರ್ ಅವರ ಹೆಸರೆತ್ತದೆ ಮತ ಕೇಳಲಿ ಎಂದು ಸವಾಲು ಹಾಕಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ,ಅಂಬೇಡ್ಕರ್ ಎಂಬುದು ಒಂದು ವ್ಯಕ್ತಿಯ ಹೆಸರಲ್ಲ.ಅದೊಂದು ಶಕ್ತಿ.ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಬಹುತ್ವದ ಭಾರತಕ್ಕೆ ಸರಿ ಹೊಂದುವಂತಹ ಸಂವಿಧಾನವನ್ನು ತಮ್ಮ ಅಪಾರ ಬುದ್ದಿವಂತಿಕೆಯಿಂದ ನೀಡಿದ್ದಾರೆ.ಬಡವರು, ದೀನದಲಿತರು, ಹಿಂದುಳಿದವರು ಸಮಾನವಾಗಿ ಬದುಕುವ ಹಕ್ಕು ಕಲ್ಪಿಸಿರುವ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ,ಇಂದು ವಿವಿಧ ಸಂಘಟನೆಗಳು ಒಗ್ಗೂಡಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ದಸಂಸ ನೇತೃತ್ವದಲ್ಲಿ ಏರ್ಪಡಿಸಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಿಸುತ್ತಿರುವುದು ಒಂದು ಹೊಸ ಸಂದೇಶವನ್ನು ನಾಡಿನ ಜನತೆಗೆ ನೀಡಿದೆ.ನಿಧಾನವಾಗಿಯಾದರೂ ಹಿಂದುಳಿದವರ್ಗದವರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಇದ್ದ ತಪ್ಪು ಭಾವನೆ ಹೋಗಿ,ಪೂಜ್ಯ ಭಾವನೆ ಮೂಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಕಾರ್ಯಕ್ರಮಗಳು ಜರಗಲಿವೆ ಎಂದರು.
ವೇದಿಕೆಯಲ್ಲಿ ಎನ್.ಕೆ.ನಿಧಿಕುಮಾರ್,ಪಿ.ಎನ್.ರಾಮಯ್ಯ,ಮಾಜಿ ಮೇಯರ್ ಗೀತಾ ರುದ್ರೇಶ್, ಮುಖಂಡರಾದ ಪ್ರಸನ್ನಕುಮಾರ್ ಗುಬ್ಬಿ,ಪ್ರತಾಪಮದಕರಿ, ಮರಿಚನ್ನಮ್ಮ, ಪುರುಷೋತ್ತಮ್, ಹೆಚ್.ಸಿ.ಹನುಮಂತರಾಯಪ್ಪ, ರೇವಣ್ಣಸಿದ್ದಯ್ಯ, ಎನ್.ಶ್ರೀನಿವಾಸ್,ವಕೀಲ ನಾಗೇಶ್,ಎಂ.ರಾಜೇಂದ್ರ,ಟಿ.ಸಿ.ಸುರೇಶ್, ಎ.ರಂಜನ್, ಪಿ.ಶಿವಾಜಿ, ಗುರುಪ್ರಸಾದ್, ಜಯಲಕ್ಷ್ಮಮ್ಮ, ಎಸ್.ರಾಮಚಂದ್ರರಾವ್, ಲಕ್ಷ್ಮೀನಾರಾಯಣ್,ಮಾರುತಿ ಸಿ.,ಸುನಿಲ್ ಏ.,ಚಂದ್ರಶೇಖರ್, ಬಾಲರಾಜು, ಗಿರೀಶ್, ರಘುಪ್ರಸಾದ್, ಮನೋಜ್ ಟಿ.,ನಿತೀನ್, ಕುಶಾಲ್,ಗಂಗಾಧರ್, ಶಿವಣ್ಣ ರಂಗಸ್ವಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.