ಗುರು ಸಿದ್ಧರಾಮೇಶ್ವರರ 850ನೇ ಜಯಂತಿ ಮಹೋತ್ಸವಕ್ಕೆ ಸಕಲ ಸಿದ್ಧತೆ

ತಿಪಟೂರು : ವಚನ ಸಾಹಿತ್ಯದ ಮೂಲಕ ನಾಡಿಗೆ ಬೆಳಕು ಮೂಡಿಸಿದ ಗುರು ಸಿದ್ಧರಾಮೇಶ್ವರರ 850ನೇ ಜಯಂತಿ ಮಹೋತ್ಸವದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷಾತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಾಯಕ ಯೋಗಿ ಗುರುಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳ ಸಾಕಾರ ಸ್ವರೂಪರಾಗಿ ತಮ್ಮ ವೈಚಾರಿಕ ಮತ್ತು ವಾಸ್ತವಿಕ ಪ್ರಜ್ಞೆಯಿಂದ ಮಾನವ ಸಮಾಜಕ್ಕೆ ಜೀವನ ಮೌಲ್ಯಗಳನ್ನು ತಂದು ಕೊಟ್ಟ ಮಹಾನುಭಾವರಾಗಿದ್ದಾರೆ. ಸಮಾಜದಲ್ಲಿ ಸಮಾನತೆಯನ್ನು ತರಲು ಕಾಯಕ ಮತ್ತು ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತಂದು ಮಾನವೀಯತೆಯ ಮಂಗಳದ ಬೆಳಕನ್ನು ನೀಡಿದರು. ಸಂಪ್ರದಾಯ ಸಂಖೊಲೆಯಿಂದ ಸ್ತ್ರೀಯರನ್ನು ಮುಕ್ತಗೊಳಿಸಿ ನವಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು. ಗುರು ಸಿದ್ಧರಾಮೇಶ್ವರರು ತಮ್ಮ ವಚನ ಸಾಹಿತ್ಯದ ಮೂಲಕ ಲೋಕವನ್ನುದ್ದರಿಸಿದರಲ್ಲದೇ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದಂತಹವರು. ಇಂತಹವರ ಜಯಂತಿಯನ್ನು ಮಾಡಲು ಅವಕಾಶ ದೊರೆತಿದ್ದು ಪ್ರತಿಯೊಬ್ಬ ಭಕ್ತರ ಸಹಕಾರ ಅಗತ್ಯವಿದೆ. ಈ ಜಯಂತಿಯ ಯಶಸ್ಸಿಗೆ ಭಕ್ತವೃಂದದಿಂದ ಮಾತ್ರ ಸಾಧ್ಯವಿದ್ದು ಅರ್ತಪೂರ್ಣವಾಗಿ ಜಯಂತಿ ಆಚರಣೆಗೆ ಮುಂದಾಗೋಣ ಎಂದರು.
850ನೇ ಜಯಂತಿಯ ಸ್ವಾಗತ ಸಮಿತಿಯ ನೇತೃತ್ವ ವಹಿಸಿರುವ ಬೋರ್‌ವೆಲ್ ಮಧುಸೂದನ್ ಮಾತನಾಡಿ ನಾಡಿನಾದ್ಯಂತ ಹಲವು ವರ್ಷಗಳಿಂದಲೂ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಗುರುಸಿದ್ದರಾಮೇಶ್ವರರ ಜಯಂತಿಯನ್ನು ಆಚರಣೆ ಸಂಘದ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಬಾರಿಯ ಜಯಂತಿಯನ್ನು ಇತಿಹಾಸ ದಾಖಲೆಯಾಗುಂತೆ ಮಾಡಲು ಸಕಲ ತಯಾರಿ ನಡೆಸಲಾಗಿದೆ. ಜ.14 ಮತ್ತು 15ರಂದು ಎರಡು ದಿನಗಳ ಕಾಲ ವಿಜೃಮಭಣೆಯಿಂದ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಜಿ ಶಾಸಕ ಕೆ.ಷಡಕ್ಷರಿ, ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್, ನೊಳಂಬ ಲಿಂಗಾಯಿತ ಸಂಘದ ನಿರ್ದೇಶಕರುಗಳಾದ ಎಂ.ಆರ್.ಸಂಗಮೇಶ್, ಮಾದೀಹಳ್ಳಿ ದಯಾನಂದ್, ದೊಡ್ಡಯ್ಯನಪಾಳ್ಯದ ಸೊಗಡು ಸೋಮಶೇಖರ್, ದಕ್ಷಿಣಾಮೂರ್ತಿ, ಹುಚ್ಚಗೊಂಡನಹಳ್ಳಿ ಲೋಕೇಶ್, ವಗವನಘಟ್ಟದ ಯೋಗಣ್ಣ, ನ್ಯಾಕೇನಹಳ್ಳಿ ಸುರೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಕೆ.ಎಂ.ರಾಜಣ್ಣ, ಗೌರವಾಧ್ಯಕ್ಷ ಪ್ರೊ.ನಂಜುಂಡಪ್ಪ ಇದ್ದರು.