ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ : ಬಿಕ್ಕಟ್ಟು ಶಮನಕ್ಕೆ ಅಧಿಕಾರಿಗಳ ಹರಸಾಹಸ
ತುರುವೇಕೆರೆ : ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಅದಿಕಾರಿಗಳು ತೆರವುಗೊಳಿಸಿದ ವಿಚಾರ ರಾಜಕೀಯ ತಿರುವು ಪಡೆದುಕೊಂಡು ಬಿಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ ಉದ್ಗಾಟನೆಗೆ ಸಜ್ಜಾಗುತ್ತಿರುವ ವಾಣಿಜ್ಯ ಮಳಿಗೆ ಸಂಕೀರ್ಣದ ಸುತ್ತ ವಿವಾದದ ಹುತ್ತ ಸೃಷ್ಟಿಯಾಗುತ್ತಿದೆ. ವಾಣಿಜ್ಯ ಮಳಿಗೆ ಉದ್ಘಾಟನೆಗೂ ಮುನ್ನ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಪಟ್ಟಣ ಪಂಚಾಐತ್ ಹಾಗೂ ಬೀದಿ ಬದಿ ವ್ಯಾಪಾರಿಗಳ ನಡುವೆ ನಡೆಯುತ್ತಿದ್ದ ಶೀತಲ ಸಮರ ರಾಜಕೀಯ ತಿರುವು ಪಡೆದುಕೊಳ್ಳಲಾರಂಭಿಸಿದೆ. ಖಾಕಿ ಕಟ್ಟೆಚ್ಚರದ ನಡುವೆ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ನಿಟ್ಟುಸಿರು ಬಿಟ್ಟಿದ್ದರು. ಹೈ ಡ್ರಾಮಾವೆಂಬಂತೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಎಂ.ಎಲ್.ಸಿ. ಬೆಮೆಲ್ ಕಾಂತರಾಜ್ ಬೀದಿ ಬದಿ ವ್ಯಾಪಾರಿಗಳಿಗೆ ಸಾಥ್ ನೀಡಿರುವುದು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಶಾಸಕ ಮಸಾಲಜಯರಾಮ್ ಕುಮ್ಮಕ್ಕಿನಿಂದ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವುದು ಖಂಡನೀಯ, ಪಟ್ಟಣ ಪಂಚಾಯತ್ ಬಡ ಬೀದಿಬದಿ ವ್ಯಾಪಾರಿಗಳ ಬದುಕಿನೊಂದಿಗೆ ಚಲ್ಲಾಟವಾಡುತ್ತಿದೆ. ಬೀದಿಬದಿ ವ್ಯಾಪಾರಿಗಳ ಹಿತ ಕಾಯಲು ನಾನು ಬದ್ದನಾಗಿರುತ್ತೇನೆ ಎಂದು ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಿರುವುದು ಅಮಾನವೀಯ, ಬಡ ಬೀದಿ ವ್ಯಾಪಾರಿಗಳ ಮೇಲೆ ಜನಪ್ರತಿನಿಧಿಗಳು, ತಾಲೂಕು ಆಡಳಿತ ಹಾಗೂ ಪೋಲೀಸ್ ಗೂಂಡಾಗಿರಿ ಪ್ರವೃತ್ತಿ ಪ್ರದರ್ಶಿಸಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲೇ ಸ್ಥಳಾವಕಾಶ ಕಲ್ಪಿಸಲಿ, ಬೀದಿ ಬದಿ ವ್ಯಾಪಾರಿಗಳ ಪರ ಹೋರಾಡಲು ನಾನು ಸಿದ್ದ ಎಂದು ಮಾಜಿ ಎಂಎಲ್ಸಿ ಬೆಮೆಲ್ ಕಾಂತರಾಜ್ ತಿಳಿಸಿದರು.
ಖಾಕಿ ಕಣ್ಗಾವಲು:-
ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಹಲವು ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗುವ ಮೂಲಕ ಬಿಗುವಿನ ವಾತಾವರಣವನ್ನು ಸೃಷ್ಟಿಸಿದೆ. ಬೀದಿಬದಿ ವ್ಯಾಪಾರಿಗಳು ಬೇರೆಡೆಗೆ ಸ್ಥಳಾಂತರದಿಂದ ಉದ್ಬವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ತಾಲೂಕು ದಂಡಾದಿಕಾರಿ ವೈ.ಎಂ. ರೇಣುಕುಮಾರ್, ಪಟ್ಟಣ ಪಂಚಾಯತ್ ಮುಖ್ಯಾದಿಕಾರಿ ಲಕ್ಷö್ಮಣಕುಮಾರ್, ಡಿ.ವೈ.ಎಸ್.ಪಿ. ರಮೇಶ್ ಪ್ರಯತ್ನ ಮುಂದುವರೆಸಿದ್ದಾರೆ. ಪರಿಸ್ಥಿತಿಯ ಮೇಲೆ ನಿಗಾವಹಿಸಲು ಹೆಚ್ಚುವರಿ ಪೋಲೀಸ್ ನಿಯೋಜನೆಗೊಳಿಸಲಾಗಿದ್ದು ವಾಣಿಜ್ಯ ಮಳಿಗೆಯ ಸುತ್ತ ಖಾಕಿ ಕಣ್ಗಾವಲಿರಿಸಿದೆ.