ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೇಟ್‌ಗೆ ನರಸಿಂಹರಾಜು ಎ.ಡಿ. ಅರ್ಜಿ
ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿ ಇಂಜಿನಿಯರಿಂಗ್ ಪದವಿಧರ ಅಗಲಕೋಟೆಯ ನರಸಿಂಹರಾಜು ಎ.ಡಿ. ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ 22 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು, ಎನ್.ಎಸ್.ಯು.ಐ, ಯುವ ಕಾಂಗ್ರೆಸ್‌ನಲ್ಲಿ ಹಲವಾರು ಜವಾಬ್ದಾರಿ ಹುದ್ದೆಗಳನ್ನು ನಿರ್ವಹಿಸಿರುವ ನರಸಿಂಹರಾಜು ಎ.ಡಿ. ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿರುವ ಸುಮಾರು 65-70 ಸಾವಿರ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮತದಾರರ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಗ್ರಾಮಾಂತರದ ಟಿಕೇಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ.
1980ರ ಜುಲೈ 15 ರಂದು ಹುಟ್ಟಿರುವ ನರಸಿಂಹರಾಜು ಎ.ಡಿ. ಬಿ.ಇ, ಎಂಟೆಕ್ ಪದವಿಧರರಾಗಿದ್ದು,12 ವರ್ಷಗಳ ಕಾಲ ಪ್ರತಿಷ್ಠಿತ ಸಂಸ್ಥೆಯಲ್ಲಿ ಹೆಚ್.ಆರ್.ಹುದ್ದೆ ನಿರ್ವಹಣೆ, ಕರ್ನಾಟಕ ರಾಜ್ಯ ಎಡ,ಬಲ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವವಿದೆ.
ರಾಜಕೀಯವಾಗಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಯೂತ್ ಕಾಂಗ್ರೆಸ್ ಉಸ್ತುವಾರಿಯಾಗಿ,2014ರಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯ ಗ್ರಾಮಾಂತರ ಕ್ಷೇತ್ರದ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕೋವಿದ್ ಮತ್ತಿತರರ ಸಂಕಷ್ಟದ ಸಂದರ್ಭದಲ್ಲಿ ಜನರೊಂದಿಗೆ ಇದ್ದು, ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಹಸ್ತ ಚಾಚುವ ಮೂಲಕ ಕ್ಷೇತ್ರದ ಮತದಾರರಿಗೆ ಧೈರ್ಯ ತುಂಬುವ ಕೆಲಸವನ್ನು ನರಸಿಂಹರಾಜು ಮಾಡಿದ್ದಾರೆ.
ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು,ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರಿಂದ ಹದಗೆಡು ತ್ತಿರುವ ಕ್ಷೇತ್ರದ ಸೌಹಾರ್ಧ ವಾತಾವರಣವನ್ನು ತಿಳಿಗೊಳಿಸಿ,ಉತ್ತಮ ಆಡಳಿತ ನೀಡುವುದು ಇವರ ಗುರಿಯಾಗಿದೆ.