ತುಮಕೂರು : ಗಡಿ ವಿವಾದ ಕುರಿತು ಸರ್ವ ಪಕ್ಷಗಳ ಸಭೆಗೆ ಕನ್ನಡ ಪರ ಸಂಘಟನೆಗಳನ್ನೂ ಆಹ್ವಾನಿಸಬೇಕು ಎಂದು ಕರುನಾಡ ವಿಜಯಸೇನೆ ಅಧ್ಯಕ್ಷ ಎಚ್. ಎನ್. ದೀಪಕ್ ಆಗ್ರಹಪಡಿಸಿದ್ದಾರೆ.
ಮಹಾರಾಷ್ಟ್ರ ಸರಕಾರ ಮತ್ತೆ ಬೆಳಗಾವಿ ವಿಷಯವನ್ನು ಕೆದಕಿರುವ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ಎದುರಾದಾಗಲೆಲ್ಲಾ ಈ ಗಡಿ ವಿವಾದವನ್ನು ಕೆಣಕುವುದು ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳಿಗೆ ಚಾಳಿಯಾಗಿಬಿಟ್ಟಿದೆ. ಕರ್ನಾಟಕದ ಒಂದಿಂಚೂ ಜಾಗವನ್ನು ಪಡೆಯಲು ಅವರಿಗೆ ಸಾಧ್ಯವಿಲ್ಲ. ಆದರೂ ರಾಜಕೀಯ ಲಾಭಕ್ಕೆ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಇತ್ತೀಚೆಗಿನ ಬೆಳವಣಿಗೆಗಳನ್ನು ಕುರಿತು ಮಾಹಿತಿ ನೀಡಬೇಕು. ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರತಿಪಕ್ಷಗಳೂ ಈ ವಿಷಯದಲ್ಲಿ ಸರರ್ಕಾರದ ಜೊತೆ ನಿಲ್ಲಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಗಡಿ ಪ್ರದೇಶದಲ್ಲಿ ಎಂಇಎಸ್ ಪುಂಡಾಟಿಕೆ ನಿಲ್ಲಲು ಕನ್ನಡ ಪರ ಸಂಘಟನೆಗಳ ಕೊಡುಗೆ ಹೆಚ್ಚಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಕನ್ನಡ ಪರ ಸಂಘಟನೆಗಳ ಸಭೆಯನ್ನು ಕರೆದು ಚರ್ಚೆ ನಡೆಸಬೇಕು. ನಾವೂ ಸಹ ಸರಕಾರದ ಬೆಂಬಲಕ್ಕೆ ನಿಲ್ಲುತ್ತೇವೆ. ಎಂದು ಅವರು ಭರವಸೆ ನೀಡಿದ್ದಾರೆ.
‘ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ನಡೆಸಿದ್ದೇವೆ. ಹುಕ್ಕೇರಿ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ನಡೆಸಿದ್ದೇವೆ. ಈ ಎರಡೂ ಕಾರ್ಯಕ್ರಮಗಳಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಅಲ್ಲಿನ ಜನ ಕನ್ನಡಿಗರಾಗಿದ್ದಾರೆ ಎನ್ನುವುದಕ್ಕೆ ಈ ಕಾರ್ಯಕ್ರಮಗಳೇ ಸಾಕ್ಷಿ’ ಎಂದು ದೀಪಕ್ ತಿಳಿಸಿದ್ದಾರೆ. ಶೀಘ್ರವೇ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರಕ್ಕೆ ಕರ್ನಾಟಕದ ಯಾವ ಗ್ರಾಮವೂ ಹೋಗುವುದಿಲ್ಲ. ನಮಗೂ ಮಹಾರಾಷ್ಟ್ರದ ಯಾವ ಹಳ್ಳಿಯೂ ನಮಗೆ ಬರುವುದಿಲ್ಲ. ಯಾವುದೇ ಬದಲಾವಣೆ ಆಗಬೇಕಾದರೂ ಸಂಸತ್ತಿನಲ್ಲಿ ಆಗಬೇಕು. ಆದರೂ ಮಹಾರಾಷ್ಟ್ರ ಈ ವಿವಾದವನ್ನು ಕೆಣಕಿ ರಾಜಕಿಯ ಲಾಭ ಮಾಡಿಕೊಳ್ಳುವುದನ್ನು ಬಿಡಬೇಕು ಎಂದು ದೀಪಕ್ ಆಗ್ರಹಿಸಿದ್ದಾರೆ.