ತುಮಕೂರು : ತುಮಕೂರು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಪ್ರಥಮ ಬಹುಮಾನವನ್ನು ಗಳಿಸಿದರೆ, ಪಾವಗಡ, ತಿಪಟೂರು, ತುಮಕೂರು, ಗುಬ್ಬಿ, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳು ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿವೆ ಎಂದು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು ಜಿಲ್ಲಾ ಅಮೆಚ್ಯುರ್ ಅಸೋಸಿಯೇಷನ್ ಹಾಗೂ ತುಮಕೂರು ಜಿಲ್ಲಾ ಖೋ-ಖೋ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ತುಮಕೂರು ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟ-2022ರ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಕುಣಿಗಲ್ ತಾಲ್ಲೂಕು ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನ ಹಾಗೂ ಪಾವಗಡ, ಮಧುಗಿರಿ ತಾಲ್ಲೂಕುಗಳು ತೃತೀಯ ಸ್ಥಾನಗಳಿಸಿವೆ ಎಂದು ಡಾ.ಕೆ.ವಿದ್ಯಾಕುಮಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಪಾವಗಡ ತಾಲ್ಲೂಕು ಪ್ರಥಮ ಬಹುಮಾನ ಗಳಿಸಿದರೆ, ತುಮಕೂರು ದ್ವಿತೀಯ ಬಹುಮಾನವನ್ನು ಹಾಗೂ ಗುಬ್ಬಿ, ಕುಣಿಗಲ್ ತಾಲ್ಲೂಕುಗಳು ತೃತೀಯ ಬಹುಮಾನಗಳನ್ನು ಗಳಿಸಿದೆ. ಅಲ್ಲದೆ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಕುಣಿಗಲ್ ತಾಲ್ಲೂಕು ಪ್ರಥಮ, ಗುಬ್ಬಿ ದ್ವಿತೀಯ ಹಾಗೂ ಕೊರಟಗೆರೆ, ತಿಪಟೂರು ತಾಲ್ಲೂಕುಗಳು ತೃತೀಯ ಬಹುಮಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ಉಳಿದಂತೆ ಮಹಿಳೆಯರ ಖೋ-ಖೋ ಪಂದ್ಯಾವಳಿಯಲ್ಲಿ ಕುಣಿಗಲ್ ತಾಲ್ಲೂಕು ಪ್ರಥಮ, ಗುಬ್ಬಿ ದ್ವಿತೀಯ ಹಾಗೂ ಕೊರಟಗೆರೆ, ತುಮಕೂರು ತಾಲ್ಲೂಕುಗಳು ತೃತೀಯ ಸ್ಥಾನಗಳನ್ನು ಗಳಿಸುವ ಮೂಲಕ ಗ್ರಾಮೀಣ ಕ್ರೀಡಾಕೂಟಕ್ಕೆ ಹೊಸ ಮೆರಗು ನೀಡಿವೆ ಎಂದು ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಂದ ಕಬಡ್ಡಿ, ಖೋ-ಖೋ ಮಹಿಳೆ ಹಾಗೂ ಪುರುಷ ಪಂದ್ಯಗಳಿಗೆ ಒಟ್ಟು 40 ತಂಡಗಳಿಂದ, ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯದಲ್ಲಿ ಭಾಗವಹಿಸಿದ್ದವು ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರು ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಬಹುಮಾನ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.