ರೈತ ಮಿತ್ರನ ಪ್ರಾಣಿಗಳ ಸಾಕಾಣಿಕೆಗೆ ಶಾಸಕ ಮಸಾಲಾ ಜಯರಾಮ್ ಒಲವು
ಗುಬ್ಬಿ: ಬಿಡುವಿಲ್ಲದ ರಾಜಕಾರಣ ಹಾಗೂ ಉದ್ದಿಮೆ ನಡುವೆ ಪ್ರಾಣಿಗಳ ಪ್ರೀತಿಗಾಗಿ ತಮ್ಮನ್ನೇ ತೊಡಗಿಸಿಕೊಂಡು ಪ್ರಾಣಿಗಳ ಸಾಕುವ ಸಲುವಾಗಿ ಫಾರಂ ಹೌಸ್ ನಿರ್ಮಿಸಿಕೊಂಡು ಬೆಲೆಬಾಳುವ ಅಪರೂಪದ ಪ್ರಬೇಧದ ಪ್ರಾಣಿಗಳನ್ನು ಕೊಂಡು ತಂದು ಸಾಕುತ್ತಿರುವ ಬಿಜೆಪಿ ಶಾಸಕ ಮಸಾಲಾ ಜಯರಾಮ್ ಸಾಕಿದ ಪ್ರಾಣಿಗಳ ಜೊತೆ ಎಲ್ಲಾ ಜಂಜಾಟ ಮರೆತು ಮಕ್ಕಳಂತೆ ಆಡುತ್ತಾರೆ.
ರೈತನಿಗೆ ಸಹಕಾರಿಯಾದ ಪ್ರಾಣಿಗಳು ಎಂದರೆ ಅತಿಯಾದ ಪ್ರೀತಿ ತೋರುವ ಶಾಸಕರು ತಮ್ಮ ಹುಟ್ಟೂರು ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಹಾಗೂ ತುರುವೇಕೆರೆ ಸಮೀಪದ ತಮ್ಮ ತೋಟದಲ್ಲಿ ಪ್ರಾಣಿಗಳ ಸಾಕಾಣಿಕೆಗೆ ಒಲವು ತೋರಿದ್ದಾರೆ. ವಿವಿಧ ಜಾತಿಯ ನಾಯಿಗಳು, ವಿಶೇಷ ಹಾಗೂ ಅಪರೂಪದ ತಳಿಗಳಾದ ಹಳ್ಳಿಕಾರ್, ಅಮೃತಕಾವಲ್ ಹಸುಗಳು, 30 ಲಕ್ಷ ಬೆಲೆಯ ಏಕಲವ್ಯ ಹೋರಿ ಈಗಾಗಲೇ ಎಲ್ಲರ ಆಕರ್ಷಣೀಯವಾಗಿದೆ. ಏಕಲವ್ಯನ ದರ್ಶನಕ್ಕೆ ತಾಲ್ಲೂಕಿನ ಹಲವು ರೈತರು ಫಾರಂ ಹೌಸ್ ಗೆ ಭೇಟಿ ನೀಡುತ್ತಿದ್ದಾರೆ.
ಸಾಕುಪ್ರಾಣಿಗಳ ಪ್ರೀತಿಯ ಒಡನಾಟ ಅರಿತ ಶಾಸಕರ ಪ್ರಾಣಿಗಳ ಮೇಲಿನ ವ್ಯಾಮೋಹ ಹಂತ ಹಂತವಾಗಿ ಹೆಚ್ಚಾಗಿ ಮಲೆನಾಡು ಗಿಡ್ಡ ತಳಿಯ ಹಸುಗಳು, ಪುಂಗನೂರು, ಗಿರ್ ತಳಿಯ ಹಸುಗಳು, ಸೀಮೆಹಸುಗಳು ಮತ್ತು ನಾಟಿ ಹಸು ಎತ್ತುಗಳನ್ನು ಸಾಕಷ್ಟು ಸಾಕಿದ್ದಾರೆ. ವಿಶೇಷವಾಗಿ ಲಕ್ಷಕ್ಕೂ ಅಧಿಕ ಬೆಲೆಬಾಳುವ ಬನ್ನೂರು ಮತ್ತು ಬೈಂದೂರು ತಳಿಯ ಕುರಿಗಳು ಎಲ್ಲಿದ್ದ ರೈತರನ್ನು ಆಕರ್ಷಿಸಿದೆ. ಒತ್ತಡಗಳಿಂದ ದೂರವಿಡುವ ಈ ಸಾಕುಪ್ರಾಣಿಗಳ ಮುದ್ದು ಎಲ್ಲಾ ಟೆಂಕ್ಷನ್ ಕಡಿಮೆ ಮಾಡುತ್ತದೆ. ಅವುಗಳ ಆಟ, ಪ್ರೀತಿ ಕೂಡಾ ನಮಗೆ ನೆಮ್ಮದಿ ಕೂಡುತ್ತದೆ ಎಂದು ಶಾಸಕರು ತಮ್ಮ ಪ್ರಾಣಿಗಳ ಮುದ್ದು ಮಾಡುತ್ತಲೇ ಹೇಳಿದರು.
ರೈತನ ಮಿತ್ರ ಎನಿಸಿಕೊಂಡ ಪ್ರಾಣಿಗಳನ್ನು ಸಾಕುವ ಮೂಲಕ ತಮ್ಮ ಒತ್ತಡದ ಬದುಕು ಹಸನ ಮಾಡಿಕೊಂಡ ಬಗ್ಗೆ ಹೇಳುವ ಶಾಸಕ ಮಸಾಲಾ ಜಯರಾಮ್ ಅವರು ಮಾದರಿ ರೈತ ಎನಿಸಿಕೊಂಡಿದ್ದಾರೆ. ಕೇವಲ ಕೃಷಿ ಅಷ್ಟೇ ಮಾಡದೆ ಅಪರೂಪದ ತಳಿ ಹಾಗೂ ಪ್ರಬೇದ ಪ್ರಾಣಿಗಳ ಉಳಿಸುವ ಕಾರ್ಯ ಮಾಡಿರುವುದು ಸಾರ್ಥಕ ಕೆಲಸವಾಗಿದೆ.