ಕನ್ನಡ ಭಾಷೆ ಸಹಸ್ರಾರು ವರ್ಷದ ಇತಿಹಾಸ ಹೊಂದಿದೆ : ಶಾಸಕ ಎಸ್.ಆರ್.ಶ್ರೀನಿವಾಸ್
ಗುಬ್ಬಿ: ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡ ಭಾಷೆಗೆ ಸಹಸ್ರಾರು ವರ್ಷದ ಇತಿಹಾಸ ಹೊಂದಿದೆ. ನಮ್ಮ ರಾಜ್ಯದಲ್ಲಿ ಮಾತೃ ಭಾಷೆಗೆ ವಿಶೇಷ ಸ್ಥಾನಮಾನ ನೀಡುವ ಬದಲು ಬಲವಂತದ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಪಂ ಹಾಗೂ ಪಪಂ ಸಹಯೋಗದಲ್ಲಿ ನಡೆದ 67 ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡದಲ್ಲೇ ಹೆಚ್ಚು ಶಿಕ್ಷಣ ಒದಗಿಸಿ ಉದ್ಯೋಗ ಸೃಷ್ಟಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.
ಕೇಂದ್ರ ಸರ್ಕಾರದ ಆರ್ಥಿಕ ವಲಯಗಳು, ರೈಲ್ವೇ, ಬ್ಯಾಂಕ್ ಗಳಲ್ಲಿ ಕನ್ನಡೇತರರಿಗೆ ಉದ್ಯೋಗ ನೀಡಲಾಗಿದೆ. ಕನ್ನಡಿಗರಿಗೆ ಅನ್ನ ಒದಗಿಸುವ ಉದ್ಯೋಗವನ್ನು ಸರ್ಕಾರ ಸೃಷ್ಟಿಸಬೇಕು. ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸಲು ಮೊದಲು ಕೇಂದ್ರ ಸರ್ಕಾರ ಮಾಡಬೇಕು. ಹಿಂದಿ ಹೇರಿಕೆ ಮಾಡಿದಲ್ಲಿ ಹೋರಾಟ ಮಾಡಲು ಕನ್ನಡಿಗರು ಸಿದ್ಧವಾಗಬೇಕು ಎಂದು ಕರೆ ನೀಡಿದ ಅವರು ಸಾಮಾಜಿಕ ಜಾಲತಾಣ ಎಂಬುದು ಕನ್ನಡ ಭಾಷೆ ಪ್ರಯೋಗಕ್ಕೆ ಯುವಕರ ಅಸ್ತ್ರವಾಗಿದೆ. ಆದರೆ ಈಚೆಗೆ ಮನಬಂದಂತೆ ವೈಯಕ್ತಿಕವಾಗಿ ಮತ್ತೊಬ್ಬರ ಟೀಕೆ ಮಾಡುತ್ತಾ ಸುಳ್ಳು ಸುದ್ದಿ ಹಬ್ಬುವ ಕೆಲಸ ಮಾಡಲಾಗುತ್ತಿದೆ. ಜಾಲತಾಣಗಳಿಗೆ ಕಡಿವಾಣ ಬೀಳುವುದು ಅಗತ್ಯವಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಬಿ.ಆರತಿ ಸಂದೇಶ ನೀಡಿ ಕನ್ನಡ ಭಾಷೆಗೆ ತನ್ನದೇ ವೈಶಿಷ್ಟ್ಯತೆ ಇದೆ. ನಾಡು ನುಡಿಗೆ ಸಂದಿರುವ ಶಾಸ್ತ್ರೀಯ ಸ್ಥಾನಮಾನ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿ ಮಾತೃ ಭಾಷೆ ವ್ಯಾಮೋಹ ಹೆಚ್ಚಿಸಬೇಕು. ಜೊತೆಗೆ ನಮ್ಮ ಸಾಹಿತ್ಯ ಬಗ್ಗೆ ಆಸಕ್ತಿ ಬೆಳೆಸಿ ಕನ್ನಡವನ್ನು ಮೇರು ಸ್ಥಾನಕ್ಕೆ ತಲುಪಿಸಬೇಕು ಎಂದರು.
ನAತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾವಿರ ಕನ್ನಡ ಪುಸ್ತಕ ಕಾರ್ಯಕ್ರಮಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸ್ವಾತಂತ್ರ‍್ಯ ಹೋರಾಟಗಾರ ಪರಮೇಶ್ವರಪ್ಪ, ತಾಪಂ ಇಓ ಶಿವಪ್ರಕಾಶ್, ಬಿ ಇ ಓ ಸೋಮಶೇಖರ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಎಲ್ಲಾ ಪಪಂ ಸದಸ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.