ತುಮಕೂರು : ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಮಿಕರ ಸಮಾವೇಶ ಭಾನುವಾರ ನಗರದಲ್ಲಿ ನಡೆಯಿತು.
ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾವೇಶವನ್ನು ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆಯಬೇಕು. ಆಯಾ ಗುತ್ತಿಗೆದಾರರು, ಕಾರ್ಮಿಕ ಸಂಘಟನೆಗಳ ಮುಖಂಡರು ಸರ್ಕಾರದ ಸೌಲಭ್ಯಗಳ ಬಗ್ಗೆ ಕಾರ್ಮಿಕರಿಗೆ ತಿಳುವಳಿಕೆ ನೀಡಿ ನೆರವಾಗಬೇಕು. ರೈತರಂತೆ ಕಾರ್ಮಿಕರೂ ದೇಶದ ಬೆನ್ನೆಲುಬು ಇವರ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.
ದೇಶದ ನಿರ್ಮಾಣದಲ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಪಾತ್ರ ಮಹತ್ವವಾದದ್ದು, ಎಲ್ಲರಿಗೂ ಮನೆ ಕಟ್ಟಿಕೊಡುವ ಕಟ್ಟಡ ಕಾರ್ಮಿಕರಿಗೆ ಸ್ವಂತ ಮನೆ ಇರುವುದಿಲ್ಲ. ಅವರ ಬದುಕು ಸಂಕಷ್ಟದಲ್ಲಿರುತ್ತದೆ. ಇಂತಹ ಕಾರ್ಮಿಕರಿಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಅವುಗಳ ಬಗ್ಗೆ ತಿಳಿದುಕೊಂಡು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ತುರುವೇಕೆರೆಯ ಎಂ.ಟಿ.ಕೃಷ್ಣಪ್ಪನವರು ಮಾತನಾಡಿ, ಶ್ರಮವನ್ನೇ ಬದುಕಾಗಿಸಿಕೊಂಡಿರುವ ಶ್ರಮಜೀವಿ ಕಟ್ಟಡ ಕಾರ್ಮಿಕರ ಕಾರ್ಯವನ್ನು ಸಮಾಜ ಗುರುತಿಸಿ, ಅವರಿಗೆ ನೆರವಾಗುವ ಪ್ರಯತ್ನ ಮಾಡಬೇಕು. ಸರ್ಕಾರದ ಯೋಜನೆಗಳು ಅರ್ಹ ಕಾರ್ಮಿಕರಿಗೆ ತಲುಪಬೇಕು ಎಂದು ಹೇಳಿದ ಎಂ.ಟಿ.ಕೃಷ್ಣಪ್ಪನವರು, ಕಾರ್ಮಿಕರು ತಮ್ಮ ಕಷ್ಟದ ನಡುವೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಮಿಕರು ಮುಖ್ಯವಾಗಿ ಸಂಘಟಿತರಾಗಬೇಕು. ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಆಗ ಅವರಿಗೆ ಅಗತ್ಯ ನೆರವು ದೊರೆಯುತ್ತದೆ ಎಂದು ತಿಳಿಸಿದರು.
ಆಗಮ ಶಾಸ್ತç ವಿದ್ವಾನ್ ಶ್ರೀನಿವಾಸನ್ ಗುರೂಜಿಯವರು ಎಲ್ಲಾ ಕಾರ್ಮಿಕರಿಗೆ ಶುಭ ಕೋರಿ, ತಮ್ಮ ಕೆಲಸ ದೇಶದ ನಿರ್ಮಾಣಕ್ಕೆ ಎನ್ನುವ ತ್ಯಾಗಮನೋಭಾವದಿಂದ ದುಡಿಯುತ್ತಿರುವ ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತಾಗಲಿ. ಸರ್ಕಾರ ಹಾಗೂ ಸಂಬಂಧಿಸಿದ ಸಂಘಟನೆಗಳು ಕಾರ್ಮಿಕರ ಹಿತ ಕಾಪಾಡುವ ಕೆಲಸ ಮಾಡಲಿ ಎಂದು ಆಶಿಸಿದರು.
ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಕಾಯಾಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಅಸಂಘಟಿತಗೊಂಡಿರುವ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸಲು ಹಾಗೂ ಅವರು ಅದರ ಸೌಲಭ್ಯಗಳನ್ನು ಪಡೆಯಲು ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಸಮಾವೇಶ ಮಾಡಿ ಕಾರ್ಮಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಿ.ದೇವರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕುಮಾರ್, ಜಿಲ್ಲಾಧ್ಯಕ್ಷ ಎಸ್.ಡಿ.ನಾಗರಾಜು, ಉಪಾಧ್ಯಕ್ಷ ಕೆ.ಎಂ.ಚಂದ್ರಶೇಖರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸೀಂಗ್ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.