ಜಿಲ್ಲೆತುಮಕೂರು

ಮಳೆಯಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರಕ್ಕೆ ಸೂಚನೆ : ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್

ತುಮಕೂರು : ಜಿಲ್ಲೆಯಲ್ಲಿ ಮತ್ತೆ ಮಳೆ ತೀವ್ರತೆ ಪಡೆದುಕೊಂಡಿದ್ದು, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಎ/ಬಿ1/ಬಿ2/ಸಿ ಕೆಟಗರಿಗಳಾಗಿ ವಿಂಗಡಿಸಿ ಸರ್ಕಾರದ ಮಾರ್ಗಸೂಚಿಯನ್ವಯ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ತಮ್ಮ ಕಚೇರಿಯಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಜಿಪಿಎಸ್ ಮಾಡಿಸಿ ನೈಜತೆಯನ್ನಾಧರಿಸಿ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು. ಮಳೆಯಿಂದ ಬಟ್ಟೆ-ಬರೆ, ದಿನಸಿ ಪದಾರ್ಥಗಳು ಹಾನಿಗೊಳಗಾದವರಿಗೆ ತಕ್ಷಣವೇ 10,000 ರೂ.ಗಳ ಪರಿಹಾರ ನೀಡಬೇಕೆಂದು ಸೂಚಿಸಿದರು.
ಬೆಳೆಹಾನಿಗೆ ಸಂಬಂಧಿಸಿದಂತೆ ಸಮೀಕ್ಷೆ ಕೈಗೊಂಡು ಪರಿಹಾರ ಪೋರ್ಟಲ್‌ನಲ್ಲಿ ರೈತರ ಅಗತ್ಯ ದಾಖಲೆಗಳನ್ನು ನಮೂದಿಸಬೇಕು. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲಿಸಬೇಕು ಎಂದರಲ್ಲದೆ ಜಿಲ್ಲೆಯ ಅಂಗನವಾಡಿ, ಶಾಲೆಗಳಲ್ಲಿ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ ಕೂಡಲೇ ಮರು ಸಂಪರ್ಕ ಕಲ್ಪಿಸಬೇಕು ಎಂದು ಬೆಸ್ಕಾಂ ಇಂಜಿನಿಯರುಗಳಿಗೆ ಸೂಚಿಸಿದರು.
ತುಮಕೂರು ತಾಲೂಕು ಮೆಳೇಹಳ್ಳಿ ಹಾಗೂ ಮುದಿಗೆರೆ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಂತ್ರಸ್ತರಿಗೆ ಸಕಾಲದಲ್ಲಿ ಆಹಾರ ಪದಾರ್ಥಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ತಹಶೀಲ್ದಾರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ನಿಗಾವಸಹಿಸಬೇಕು ಎಂದು ನಿರ್ದೇಶನ ನೀಡಿದರು.
ಎಲ್ಲ ಉಪವಿಭಾಗಾಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರರು ತಮ್ಮ ವ್ಯಾಪ್ತಿಗೆ ಬರುವ ಅಂಗನವಾಡಿ, ವಿದ್ಯಾರ್ಥಿನಿಲಯ, ಶಾಲೆ, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದರಲ್ಲದೆ ಗ್ರಾಮ ಪಂಚಾಯತಿಗಳ ಕೆರೆಗಳಿಗೆ ಸಂಬಂಧಿಸಿದ ಪಿಡಿಓಗಳು ಒತ್ತುವರಿ ಮುಕ್ತ ಕೆರೆ ಎಂದು ಪ್ರಮಾಣ ಪತ್ರವನ್ನು ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಕೆ. ವಿದ್ಯಾಕುಮಾರಿ ಮಾತನಾಡಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳ ಜಿಪಿಎಸ್ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಿಲ್ಲೆಯ 330 ಗ್ರಾಮ ಪಂಚಾಯತಿಗಳಲ್ಲಿ ತಲಾ 2 ವಿವೇಕಾನಂದ ಸ್ವ-ಸಹಾಯ ಸಂಘಗಳನ್ನು ರಚಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಪಂಚಾಯತಿಗಳಲ್ಲಿ ತಲಾ ಒಂದು ಸ್ವ-ಸಹಾಯ ಸಂಘಗಳನ್ನು ರಚಿಸಲಾಗಿದ್ದು, ಸಂಘಗಳು ಬ್ಯಾಂಕ್ ಖಾತೆ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಮಟ್ಟದ ಕಾರ್ಯಪಡೆಗಳ ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು. ತಾಯಿ-ಶಿಶು ಮರಣ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ವಸತಿ ಯೋಜನೆ, 94ಸಿ ಹಾಗೂ 94ಸಿಸಿ ಹಕ್ಕು ಪತ್ರ, ಕಂದಾಯ ಗ್ರಾಮ, ಅಮೃತ ಶಾಲೆ, ಅಮೃತ ಅಂಗನವಾಡಿ, ಅಮೃತ ಗ್ರಾಮ ಪಂಚಾಯತಿ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ವಿ. ಅಜಯ್, ತಹಶೀಲ್ದಾರ್‌ಗಳಾದ ಮೋಹನ್‌ಕುಮಾರ್, ನಯೀದಾ ಜಂ ಜಂ, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಂಜಿನಪ್ಪ ಎನ್. ಮತ್ತಿತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker