ಕೊರಟಗೆರೆ
ವರುಣನ ಆರ್ಭಟಕ್ಕೆ ಹೊಳವನಹಳ್ಳಿ, ಬಿ ಡಿ ಪುರ ರಸ್ತೆ ಸಂಪರ್ಕ ಕಡಿತ.. ಲಂಕೇನಹಳ್ಳಿಯ ಸೇತುವೆ ಸಂಪೂರ್ಣ ಕುಸಿತ
ಕೊರಟಗೆರೆ : ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ತಾಲ್ಲೂಕಿನ ಜನತೆ ನಲುಗಿ ಹೋಗಿದ್ದಾರೆ . ಬಿಡದೆ ಸುರಿಯುತ್ತಿರುವ ಈ ಮಳೆಯಿಂದ ರಸ್ತೆಗಳು ಹಾಳಾಗಿದ್ದರೆ ಕಂಬಗಳು, ಮರಗಳೆಲ್ಲ ಧರೆಗುರುಳಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಮಳೆಯಿಂದ ಕಂಗಲಾಗಿರುವ ರೈತರ ಪಾಡು ನಿಜಕ್ಕೂ ಕೂಡ ದುರದೃಷ್ಟಕರ ಸಂಗತಿಯಾಗಿದೆ.ಸಾಲ ಸೂಲ ಮಾಡಿ ರೈತರು ಬಿತ್ತಂತಹ ಬೆಳೆ ನೆಲ ಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 2 ತಿಂಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ತಾಲ್ಲೂಕಿನ ಅದೆಷ್ಟೋ ಮನೆಗಳಿಗೆ ನೀರು ನುಗ್ಗಿ ಕೆಲ ಮನೆಗಳು ನೆಲಕ್ಕುರುಳಿದ್ದವು ಆ ಸಂದರ್ಭದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿಯವರು ನೆರೆ ಸಂತ್ರಸ್ಥರಿಗೆ ತಮ್ಮ ಆಶ್ರಮದಿಂದ ದಿನಸಿ ಕಿಟ್ ಗಳು, ಹೊದಿಕೆ ಸೇರಿದಂತೆ ಟಾರ್ಪಲ್ ಗಳನ್ನು ತಾಲ್ಲೂಕು ತಹಸೀಲ್ದಾರ್ ರವರ ಮುಖಾಂತರ ಸಂತ್ರಸ್ಥರಿಗೆ ನೆರವು ನೀಡಿದ್ದರು.
ಇನ್ನು ಮಳೆಯಿಂದಾಗಿ ತಾಲ್ಲೂಕಿನ ಹೊಳವನಹಳ್ಳಿ ಬಿ ಡಿ ಪುರ ಮಾರ್ಗ ಕಲ್ಪಿಸುವಂತಹ ರಸ್ತೆಯ ಸೇತುವೆಯ ಮೇಲೆ ಅತಿಯಾಗಿ ಮಳೆ ಬಂದು ಗರುಡಾಚಲ ನದಿ ಹರಿಯುತ್ತಿರುವ ಕಾರಣ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಹೋಬಳಿ ಕೇಂದ್ರವಾದ ಹೊಳವನಹಳ್ಳಿಗೆ ಸುತ್ತಮುತ್ತಲಿನ ಸಾವಿರಾರು ಜನರು ತಮ್ಮ ವ್ಯಾಪಾರ, ವ್ಯವಹಾರಕ್ಕಾಗಿ ಬರಬೇಕಾದರೆ ಕೇವಲ 5-6 ಕಿಲೋ ಮೀಟರ್ ಬಳಸಿ ಬರುತ್ತಿದ್ದರು ಆದರೆ ಈಗ ಅತಿಯಾಗಿ ಮಳೆಯಾದ ಕಾರಣ ಅಕ್ಕಪಕ್ಕದ ರೈತರು, ಸಾರ್ವಜನಿಕರು ಸುಮಾರು 20 ರಿಂದ 25 ಕಿಲೋಮೀಟರ್ ನಷ್ಟು ಬಳಸಿಕೊಂಡು ಬರುವಂತಹ ಪರಿಸ್ಥಿತಿ ಎದುರಾಗಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಗಳು ನಡೆಯುವ ಸಮಯ ಆಗಿರುವುದರಿಂದ ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ದಿಕ್ಕು ಕಾಣದಾಗಿ ರಸ್ತೆ ಬಂದ್ ಆಗಿರುವ ಕಾರಣ ಪರದಾಡುವಂತಾಗಿದೆ.
ಈ ವರ್ಷ ಅತಿಯಾಗಿ ಮಳೆ ಬರುತ್ತಿರುವ ಕಾರಣ ಸಣ್ಣ ಪುಟ್ಟ ಕೆರೆಯಿಂದ ಹಿಡಿದು ದೊಡ್ಡ ದೊಡ್ಡ ಕೆರೆಗಳೆಲ್ಲ ಕೋಡಿ ಬಿದ್ದು ನೀರು ಹರಿಯುತ್ತಿದೆ ಸುಮಾರು 30 ವರ್ಷದ ಹಿಂದೆ ಕಟ್ಟಿದ್ದ ಮನೆಗಳು ನೆಲಸಮವಾಗಿದೆ ಜೊತೆಗೆ ರಸ್ತೆಗಳೆಲ್ಲ ಹಾಳಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಲ್ಲೆಲ್ಲಿ ರಸ್ತೆಗಳು, ಸೇತುವೆಗಳು ಹಾಳಾಗಿದೆಯೋ ಅವುಗಳನ್ನು ಗುರುತಿಸಿ ದುರಸ್ಥಿ ಕಾರ್ಯ ಮಾಡಬೇಕಾಗಿದೆ.
ಈ ಹಿಂದೆ ಅತಿಯಾಗಿ ಮಳೆ ಬಂದ ಕಾರಣ ರೈತರ ಜಮೀನುಗಳಿಗೆ ನೀರು ನುಗ್ಗಿರುವ ಹಿನ್ನೆಲೆ ರೈತರ ಬೆಳೆಗಳು ರೈತರ ಕೈಗೆ ಸಿಗದೇ ಸಂಪೂರ್ಣ ಹಾಳಾಗಿವೆ. ಮತ್ತೆ ಈಗ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಅಡಿಕೆ ತೋಟ, ಬಾಳೆ ತೋಟಗಳಿಗೆಲ್ಲ ನೀರು ನುಗ್ಗಿ ರೈತರಿಗೆ ದಿಕ್ಕೇ ತೋಚದಂತಾಗಿದೆ ಈ ಕೂಡಲೇ ಸಂಬಂಧ ಪಟ್ಟ ಇಲಾಖೆಗಳು ರೈತರ ನೀರು ನುಗ್ಗಿ ಹಾಳಾಗಿರುವ ಹೊಲಗಳಿಗೆ ಭೇಟಿ ನೀಡಿ ಸರ್ಕಾರ ದಿಂದ ಪರಿಹಾರ ಒದಗಿಸಬೇಕಾಗಿದೆ ಮತ್ತು ಲಂಕೇನಹಳ್ಳಿ ಯಿಂದ ಚಿoಪುಗಾನಹಳ್ಳಿ, ಹೊಳವನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಸಂಪೂರ್ಣ ಕಿತ್ತು ಹೋಗಿದ್ದು, ಇದುವರೆಗೂ ಇಲಾಖೆಯ ಅಧಿಕಾರಿಗಳಾಗಲಿ, ಶಾಸಕರಾಗಲಿ ಸ್ಥಳಕ್ಕೆ ಬಂದು ಇಲ್ಲಿನ ಪರಿಸ್ಥಿತಿ ನೋಡೇ ಇಲ್ಲ ಹಾಗೂ ವಾಹನ ಸವಾರರಿಗೆ ಸಂಚಾರ ಮಾಡಲು ಇಲ್ಲಿ ಸೇತುವೆ ಮರು ನಿರ್ಮಾಣ ಮಾಡಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.