ಶಿರಾ : 35 ವರ್ಷಗಳಿಂದ ನಿರಂತರವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವಂತೆ ಒಕ್ಕಲಿಗ ಸಮುದಾಯ ಸರಕಾರಗಳ ಮೇಲೆ ಒತ್ತಡ ಹಾಕುತ್ತಿದ್ದರು ನಿರ್ಲಕ್ಷ ಮಾಡುತ್ತಿರುವುದು ಸಮಂಜಸವಲ್ಲ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ .ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ಒಕ್ಕಲಿಗ ಸಮುದಾಯಕ್ಕೆ ನೀಡಬೇಕಾದ ಮೀಸಲಾತಿ ಬಗ್ಗೆ ಸರಕಾರ ಸಮುದಾಯದ ಪ್ರಮುಖ ಶ್ರೀಗಳು ಹಾಗೂ ಮುಖಂಡರೊಂದಿಗೆ ಸಾಧಕ -ಬಾದಕ ಚರ್ಚಿಸಿ ಮೀಸಲಾತಿ ಪ್ರಮಾಣವನ್ನು 3.5 ರಿಂದ 9ಕ್ಕೆ ಏರಿಕೆ ಮಾಡುವಂತೆ ಆಗ್ರಹಿಸಿದರು.
ಶಿರಾ ತಾಲ್ಲೂಕಿನ ಬೋರಸಂದ್ರ. ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಇತರೆ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿನ ಮಾಡಿರುವುದು ಸ್ವಾಗತ ಅರ್ಹ, ಆದರೆ ಒಕ್ಕಲಿಗ ಸಮುದಾಯದ ಬೇಡಿಕೆಗೆ ಸರಕಾರ ಸ್ಪಂದಿಸದಿರುವುದು ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ತೀವ್ರ ಅನ್ಯಾಯವಾಗಿದೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 16ರಷ್ಟು ಒಕ್ಕಲಿಗ ಸಮುದಾಯವಿದೆ ರಾಜ್ಯ ಸರಕಾರ 3ಎ ಅಡಿ, 3.5 ರಷ್ಟು ಮೀಸಲಾತಿ ನೀಡಿದೆ ಇದರಲ್ಲಿ ಪ್ರಮುಖವಾಗಿ ಒಕ್ಕಲಿಗ ಸಮುದಾಯ ಸೇರಿದಂತೆ 124 ಒಳ ಪಂಗಡಗಳು ಈ ಮೀಸಲಾತಿಗೆ ಒಳಪಡುತ್ತವೆ. ಒಕ್ಕಲಿಗ ಸಮುದಾಯ ಎಷ್ಟೇ ಪ್ರಬಲವಾಗಿದ್ದರೂ ಸಹ ಚಾಮರಾಜಪೇಟೆ, ಬೆಂಗಳೂರು ಗ್ರಾಮಾಂತರ ತುಮಕೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಇಂದಿಗೂ ಸಹಸ್ರರು ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ.
ಎಷ್ಟೇ ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೂ ಸಹ ಕಡಿಮೆ ಮೀಸಲಾತಿ ಇರುವುದರಿಂದ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಅವಕಾಶ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಐಎಎಸ್ ಐಪಿಎಸ್ ನಂತಹ ಹುದ್ದೆಗಳು ಮೀಸಲಾತಿ ಇಲ್ಲದಿದ್ದರೂ ಕೆಲವೇ ಸಮುದಾಯಗಳ ಪಾಲಾಗುತ್ತಿದೆ. ಈ ಬಗ್ಗೆ ಕಳೆದ ಮೂರು ದಶಕಗಳಿಂದ ಒಕ್ಕಲಿಗ ಸಮುದಾಯ ಸರಕಾರದ ಮನವರಿಕೆ ಮಾಡಿಕೊಟ್ಟಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ರಾಜ್ಯ ಸರಕಾರ ತಕ್ಷಣ ಒಕ್ಕಲಿಗ ಸಮುದಾಯದ ಶ್ರೀಗಳು ಹಾಗೂ ಪ್ರಮುಖ ಮುಖಂಡರುಗಳ ಸಭೆ ನಡೆಸುವ ಮೂಲಕ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಇಲ್ಲವಾದಲ್ಲಿ ಇದೇ ಧೋರಣೆಯನ್ನು ಸರಕಾರ ಅನುಸರಿಸಿದರೆ ನಮ್ಮ ಸಮುದಾಯದ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಲಾಗುವುದು ಎಂದು ಸರಕಾರಕ್ಕೆ ಶ್ರೀಗಳು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಗೌರವಧ್ಯಕ್ಷ ಬಿ. ಜಯರಾಜ್, ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷ ಚಂದ್ರೇಗೌಡ, ಪ್ರಭು ಗೌಡ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ ನಿರ್ದೇಶಕರು, ಗ್ರಾಮಸ್ಥರು ಉಪಸ್ಥಿತರಿದ್ದರು.