
ತುಮಕೂರು : ರಾಜ್ಯದಲ್ಲಿ 10ನೇ ದಿನಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕಲ್ಪತರುನಾಡಿನಲ್ಲಿ 2ನೇ ದಿನವೂ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದ್ದು, ಕಾನೂನು ಸಚಿವರ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಕನಕ ಜಯಂತಿಯಲ್ಲಿ ರಾಹುಲ್‌ಗಾಂಧಿ ಅವರು ಭಾಗಿಯಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ತುರುವೇಕೆರೆ ತಾಲ್ಲೂಕಿನ ಬಾಣಸಂದ್ರ ಗ್ರಾಮದ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ರಾಹುಲ್‌ಗಾಂಧಿಯವರು ಬೆಳಿಗ್ಗೆ ೬.೩೦ಕ್ಕೆ ತಿಪಟೂರು ತಾಲ್ಲೂಕಿನ ಕೆ.ಬಿ. ಕ್ರಾಸ್‌ಗೆ ಕಾರಿನಲ್ಲಿ ಆಗಮಿಸಿದರು.
ಕೆ.ಬಿ.ಕ್ರಾಸ್‌ಗೆ ಆಗಮಿಸಿದ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತಿಸಲಾಯಿತು. ರಾಹುಲ್‌ಗಾಂಧಿಯವರನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆತ್ಮೀಯವಾಗಿ ಬರ ಮಾಡಿಕೊಂಡರು.
ಕೆ.ಬಿ. ಕ್ರಾಸ್‌ನಿಂದ ಬೆಳಿಗ್ಗೆ ೬.೪೦ಕ್ಕೆ ಆರಂಭವಾದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರುಗಳಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ವೇಣುಗೋಪಾಲ್, ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ಆರ್. ರಾಜೇಂದ್ರ, ಡಾ. ರಫೀಕ್ ಅಹಮದ್ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಕೆ.ಬಿ.ಕ್ರಾಸ್‌ನಿಂದ ಚಿಕ್ಕನಾಯಕನಹಳ್ಳಿ ಸೇರಿದಂತೆ ಭಾರತ್ ಜೋಡೋ ಯಾತ್ರೆ ಸಾಗುತ್ತಿರುವ ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಪಕ್ಷದ ಬಾವುಟಗಳು, ಪ್ಲೆಕ್ಸ್ಗಳು ರಾರಾಜಿಸುತ್ತಿದ್ದು, ಕಾರ್ಯಕರ್ತರ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಗೊಳಿಸುವಂತಿವೆ.
ಪಾದಯಾತ್ರೆಯುದ್ದಕ್ಕೂ ರಾಹುಲ್‌ಗಾಂಧಿಯವರು ಕಾರ್ಯಕರ್ತರು, ರೈತರು, ಜನಸಾಮಾನ್ಯರೊಂದಿಗೆ ನಗು ನಗುತ್ತಲೇ ಮಾತನಾಡುತ್ತಾ, ಅವರ ಸಮಸ್ಯೆಗಳನ್ನು ಆಲಿಸುತ್ತಾ ಹೆಜ್ಜೆ ಹಾಕುತ್ತಿರುವುದು ಕಾರ್ಯಕರ್ತರು ಮತ್ತಷ್ಟು ಹುರುಪು ತಂದಿದೆ.
ಪಾದಯಾತ್ರೆ ಸಾಗಿದ ಮಾರ್ಗದಲ್ಲಿ ಬರುವ ಹಳ್ಳಿಗಳು, ಪ್ರಮುಖ ವೃತ್ತದಲ್ಲಿ ನೆರೆದಿದ್ದ ಜನರತ್ತ ರಾಹುಲ್‌ಗಾಂಧಿಯವರು ಕೈ ಬೀಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಪಾದಯಾತ್ರೆ ಮಾರ್ಗದ ಮಧ್ಯೆ ಕಲಾವಿದರ ತಂಡವೊಂದರಿಂದ ನಡೆದ ನಾಟಕ ಪ್ರದರ್ಶನವನ್ನು ಸಹ ರಾಹುಲ್‌ಗಾಂಧಿಯವರು ವೀಕ್ಷಿಸಿದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿಯವರ ಸ್ವಗ್ರಾಮ ಜೆ.ಸಿ. ಪುರ ಗ್ರಾಮಕ್ಕೆ ಬೆಳಿಗ್ಗೆ ೮.೧೫ಕ್ಕೆ ಭಾರತ್ ಜೋಡೋ ಯಾತ್ರೆ ತಲುಪಿತು. ಬಳಿಕ ಸಚಿವ ಮಾಧುಸ್ವಾಮಿ ಅವರ ನಿವಾಸದ ಸಮೀಪದಲ್ಲೇ ಇರುವ ಪ್ರೊ. ಶಿವನಂಜಪ್ಪ ಎಂಬುವರ ಮನೆಗೆ ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ತೆರಳಿ ಅಲ್ಲಿಯೇ ಚಹಾ ಸೇವಿಸಿ ಕೆಲ ಹೊತ್ತು ಚರ್ಚೆ ನಡೆಸಿದರು.
ಜೆ.ಸಿ.ಪುರದಲ್ಲಿ ಚಹಾ ಸೇವಿಸಿದ ನಂತರ ಪಾದಯಾತ್ರೆಯನ್ನು ಮುಂದುವರೆಸಿದ ರಾಹುಲ್‌ಗಾಂಧಿಯವರು ಬೆಳಿಗ್ಗೆ ೧೦ ಗಂಟೆಗೆ ಚಿಕ್ಕನಾಯಕನಹಳ್ಳಿ ಪಟ್ಟಣ ತಲುಪಿದರು.
ಚಿಕ್ಕನಾಯಕನಹಳ್ಳಿಯ ಕನಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಹುಲ್‌ಗಾಂಧಿಯವರು ಪಾಲ್ಗೊಂಡು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಚಿಕ್ಕನಾಯಕನಹಳ್ಳಿ ಕಂಬಳಿ ಸೊಸೈಟಿಗೂ ಭೇಟಿ ನೀಡಿದ ರಾಹುಲ್‌ಗಾಂಧಿ ಕಂಬಳಿಗಳನ್ನು ವೀಕ್ಷಿಸಿದರು. ಇದೇ ವೇಳೆ ಕಂಬಳಿ ಸೊಸೈಟಿಯಿಂದ ರಾಹುಲ್‌ಗಾಂಧಿಯವನ್ನು ಅಭಿನಂದಿಸಲಾಯಿತು.
ಚಿಕ್ಕನಾಯಕನಹಳ್ಳಿಯಿಂದ ತರಬೇನಹಳ್ಳಿಗೆ ತೆರಳಲು ಕಾರಿನಲ್ಲಿ ಕುಳಿತ ರಾಹುಲ್‌ಗಾಂಧಿಯವರು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿ ಮತ್ತೆ ಪೋಷಕರ ಕೈಗೆ ಮಕ್ಕಳನ್ನು ನೀಡಿ ತಮ್ಮ ಪ್ರಯಾಣವನ್ನು ಬೆಳೆಸಿದರು.
ರೈತರೊಂದಿಗೆ ಸಂವಾದ :-
ತರಬೇನಹಳ್ಳಿಯಲ್ಲಿ ಉಪಹಾರ ಸೇವಿಸಿ ನಂತರ ರೈತ ಅಣ್ಣೆಕಟ್ಟೆ ವಿಶ್ವನಾಥ್ ಮತ್ತು ಇತರ ರೈತರೊಂದಿಗೆ ರಾಹುಲ್‌ಗಾಂಧಿಯರು ಸ್ವಲ್ಪ ಹೊತ್ತು ಸಂವಾದ ನಡೆಸಿ, ತೆಂಗು ಬೆಳೆಗಾರರ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಿದರು.
ಸಂವಾದದ ಬಳಿಕ ತರಬೇನಹಳ್ಳಿಯಲ್ಲೇ ವಿಶ್ರಾಂತಿ ಪಡೆದು, ನಂತರ ಭಾರತ್ ಜೋಡೋ ಯಾತ್ರೆ ಸಾಗಿ, ರಾತ್ರಿ ಬರಕನಾಳು ಗೇಟ್‌ನಲ್ಲಿ ವಾಸ್ತವ್ಯ ಹೂಡಿದರು.