ನಿಯಮಾನುಸಾರ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಿ : ಎ.ನಾರಾಯಣಸ್ವಾಮಿ
ಶಿರಾ ಮಿನಿ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ
ಶಿರಾ : ಸುಮಾರು 2000ನೇ ಇಸವಿಯಿಂದ ಬಾಕಿ ಉಳಿದಿದ್ದ ಬಗರ್ ಹುಕುಂ ಕಡತಗಳನ್ನು ತಹಶೀಲ್ದಾರ್ ಅವರು ವಿಲೇವಾರಿ ಮಾಡುತ್ತಿರುವುದು ಉತ್ತಮ ಕಾರ್ಯ. ಉಳಿದಂತೆ ಸಾಗುವಳಿ ಮಾಡುತ್ತಿರುವ ರೈತರಿಗೆ ಸರಕಾರದ ನಿಯಮಾನುಸಾರ ಸಾಗುವಳಿ ಚೀಟಿಗಳನ್ನು ನೀಡಲು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಎ.ನಾರಾಯಣ ಸ್ವಾಮಿ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಂಡ, ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸುವಲ್ಲಿ ಶಿರಾ ತಾಲ್ಲೂಕಿನಲ್ಲಿ ಹೆಚ್ಚು ಪ್ರಗತಿ ಆಗಿದೆ. ಎಡಿಎಲ್‌ಆರ್ ಹಾಗೂ ತಹಶೀಲ್ದಾರ್ ಅವರು ಜಂಟಿಯಾಗಿ ಕ್ರಮ ವಹಿಸಿದ್ದಾರೆ. ಇದೇ ರೀತಿ ಮುಂದುವರೆಸಿ ಶೀಘ್ರ ಕಂದಾಯ ಗ್ರಾಮಗಳನ್ನು ರಚಿಸಲು ಕ್ರಮ ವಹಿಸಿ ಎಂದು ತಿಳಿಸಿದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮಾತನಾಡಿ ಬಗರ್ ಹುಕುಂ ಯೋಜನೆಯಡಿ ಸಾಗುವಳಿ ಮಾಡುತ್ತಿರುವ ಅರ್ಹ ಫಲಾನುಭವಿಗಳಿಗೆ ಸ್ಥಳ ಪರಿಶೀಲನೆ ಮಾಡಿ ಮಂಜೂರಾತಿ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ತಹಶೀಲ್ದಾರ್ ಮಮತ ಅವರು ಸಭೆಯಲ್ಲಿ ಮಾಹಿತಿ ನೀಡಿ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದಲ್ಲಿ ನಮೂನೆ 50, 53 ಹೊರತುಪಡಿಸಿ ನಮೂನೆ 57ರಲ್ಲಿ ಸುಮಾರು 860 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶಿರಾ ತಾಲ್ಲೂಕಿನಲ್ಲಿ ಒಟ್ಟು 100 ಕಂದಾಯ ಗ್ರಾಮಗಳನ್ನು ರಚಿಸಲು ಗುರುತಿಸಲಾಗಿದ್ದು, ಅದರಲ್ಲಿ ಪ್ರಾಥಮಿಕ ಅಧಿಸೂಚನೆಯಾಗಿರುವ ಗ್ರಾಮಗಳು 85, ಬಾಕಿ ಇರುವ ಗ್ರಾಮಗಳು 15 ಇವೆ. 2ಇ ಅಧಿಸೂಚನೆಯಾಗಿರುವ ಗ್ರಾಮಗಳು 72, 2ಇ ಅಧಿಸೂಚನೆಗಾಗಿ ಪಹಣಿಯಲ್ಲಿ ಇಂಡೀಕರಣವಾಗಿರುವ ಗ್ರಾಮಗಳು 48, 2ಇ ಅಧಿಸೂಚನೆಯಾಗಿ ಪಹಣಿಯಲ್ಲಿ ಇಂಡೀಕರಣವಾಗಲು ಬಾಕಿ ಇರುವ ಗ್ರಾಮಗಳ ಸಂಖ್ಯೆ 24 ಇವೆ. ಅಂತಿಮ ಅಧಿಸೂಚನೆಯಾಗಿರುವ ಗ್ರಾಮಗಳು 11, ಅಂತಿಮ ಅಧಿಸೂಚನೆಗೆ ಬಾಕಿ ಇರುವ ಗ್ರಾಮಗಳು 74 ಇವೆ. ಅಂತಿಮ ಅಧಿಸೂಚನೆಯಾಗಿ ಹಕ್ಕು ಪತ್ರ ವಿತರಿಸಲು ಕ್ರಮ ವಹಿಸಿರುವ ಗ್ರಾಮಗಳು 5 ಇವೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ನಗರಸಭಾ ಸದಸ್ಯರಾದ ರಂಗರಾಜು, ಉಮಾ ವಿಜಯರಾಜ್, ವಲಯ ಅರಣ್ಯ ಅಧಿಕಾರಿ ನವನೀತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಗ್ರೇಡ್-2 ತಹಶೀಲ್ದಾರ್ ಮಂಜುನಾಥ್, ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.