ಕುಣಿಗಲ್
ವಸತಿ ಯೋಜನೆ : ಮನೆಗಳ ಹಂಚಿಕೆಯಲ್ಲಿ ಶಾಸಕ ರಂಗನಾಥ್ ಅವರಿಂದ ತಾರತಮ್ಯ : ಜೆಡಿಎಸ್ ತಾʼʼ ಅಧ್ಯಕ್ಷ ಬಿ.ಎನ್. ಜಗದೀಶ್ ಆರೋಪ
ಕುಣಿಗಲ್ : ಸರ್ಕಾರದ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಬಂದಿರುವ ಮನೆಗಳನ್ನು ಪಕ್ಷಾತೀತವಾಗಿ ಹಂಚಿಕೆ ಮಾಡಲು ಶಾಸಕರು ತಾರತಮ್ಯ ಮಾಡಿ ಸಾಮಾಜಿಕ ನ್ಯಾಯವನ್ನು ಮರೆತಿದ್ದಾರೆ ಎಂದು ಜೆಡಿಎಸ್ ತಾಲೂಕ್ ಅಧ್ಯಕ್ಷ ಬಿ ಎನ್ ಜಗದೀಶ್ ಆರೋಪಿಸಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ 36 ಪಂಚಾಯಿತಿಗಳಿಗೆ 2022/23 ನೇ ಸಾಲಿನ ಸರ್ಕಾರದ ವಿವಿಧ ವಸತಿ ಯೋಜನೆಗಳ 1000 ಮನೆಗಳು ಬರಬೇಕಿತ್ತು ಆದರೆ ಶಾಸಕರ ನಿರ್ಲಕ್ಷದಿಂದ 900 ಮನೆಗಳು ಬಂದಿವೆ ಅದರಲ್ಲೂ ಶಾಸಕರು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಅಧಿಕಾರದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುಹೆಚ್ಚುಮನೆಗಳನ್ನು ನೀಡಿ ಅದೇ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಧ್ಯಕ್ಷರುಗಳಿರುವ ಪಂಚಾಯತಿಗಳಿಗೆ ಬೆರಳಿಕೆಯಷ್ಟು ಮನೆಗಳನ್ನು ನೀಡುವ ಮೂಲಕ ತಾರತಮ್ಯ ಎಸಗಿ ಸಾಮಾಜಿಕ ನ್ಯಾಯ ಒದಗಿಸಲು ಶಾಸಕರು ವಿಫಲರಾಗಿದ್ದಾರೆ. ಇವರ ಈ ವರ್ತನೆಗೆ ಪಕ್ಷ ಕಟುವಾಗಿ ಖಂಡಿಸುತ್ತದೆ ಎಂದ ಅವರು ತಾಲೂಕಿನಲ್ಲಿ ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಎರಡು ಕೋಟಿ ರೂಗಳನ್ನು ಖನಿಜ ಮತ್ತು ಭೂವಿಜ್ಞಾನ ಇಲಾಖೆ ಅಡಿ ಮಂಜೂರಾತಿ ಮಾಡಲಾಗಿದೆ ಆದರೆ ಶಾಸಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅವರಿಗೆ ಇಷ್ಟ ಬಂದ ಕಡೆಗಳಲ್ಲಿ ಮನಸ್ಸು ಇಚ್ಛೆ ಅವರ ಬೆಂಬಲಿಗರಿಗೆ ಸಿಸಿ ಚರಂಡಿ, ರಸ್ತೆಗಳನ್ನು, ನಿರ್ಮಿಸಲು ಈ ಹಣವನ್ನು ಹಂಚಿಕೆ ಮಾಡಿರುವುದು ಕಾನೂನು ಬಾಹಿರ ಇದನ್ನು ಈಗಾಗಲೇ ನಾವು ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ಗಣಿ ಇಲಾಖೆಯಿಂದ ಬಂದ ಹಣವನ್ನು ಅದೇ ಉದ್ದೇಶಗಳಿಗೆ ಬಳಸಬೇಕೆಂದು ಮನವಿ ಪತ್ರವನ್ನು ನೀಡಿದ್ದೇವೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನಿಸುತ್ತದೆ ಎಂದ ಅವರು ಈ ಕೂಡಲೇ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ವಿವಿಧ ವಸತಿ ಯೋಜನೆಗಳ ಮನೆಗಳನ್ನು ಸಾಮಾಜಿಕ ನ್ಯಾಯ ಒದಗಿಸುವ ರೀತಿಯಲ್ಲಿ ಸಮರ್ಪಕವಾಗಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮನೆ ಹಂಚಿಕೆ ಮಾಡಬೇಕು ಹಾಗೂ ಗಣಿ ಇಲಾಖೆಯಿಂದ ಬಂದಿರುವ ಎರಡು ಕೋಟಿ ರೂಗಳನ್ನು ಅದೇ ಉದ್ದೇಶಕ್ಕೆ ಬಳಸಬೇಕು ಇಲ್ಲದಿದ್ದರೆ ತಾಲೂಕು ಪಂಚಾಯತಿ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ತಾಲೂಕಿನ ಬಿಜೆಪಿ ಮುಖಂಡರಿಗೆ ಇವೆರಡು ವಿಷಯ ಗೊತ್ತಿದ್ದರೂ ಕಂಡರೂ ಕಾಣದಂತಿರುವುದನ್ನು ನೋಡಿದರೆ ಇವರು ಶಾಮೀಲಾಗಿರಬೇಕು ಎಂದು ದೂರಿದರು.
ಈ ಸಂದರ್ಭದಲ್ಲಿ ಕೆ ಎಚ್ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಉಪಾಧ್ಯಕ್ಷ ಶಶಿಕಲ ಮಹೇಶ್, ಸಂತೆಮಾವತ್ತೂರು ಗ್ರಾ ಪಂ ಅಧ್ಯಕ್ಷ ದಾಸೇಗೌಡ, ಯಡಿಯೂರು ಗ್ರಾ.ಪಂ. ಅಧ್ಯಕ್ಷ ದೇವರಾಜು, ಅಮೃತೂರು ಗ್ರಾಂಪಂ ಅಧ್ಯಕ್ಷೆ ಲಲಿತಮ್ಮ, ಭಕ್ತರಹಳ್ಳಿ ಗ್ರಾ ಪಂ ಅಧ್ಯಕ್ಷೆ ಅಲಿಮಬಿ ಗೌಸ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ತರೀಕೆರೆ ಪ್ರಕಾಶ್, ಕೃಷ್ಣಕುಮಾರ್, ಮಂಜುನಾಥ್, ಮಾಜಿ ಪುರಸಭಾ ಸದಸ್ಯ ಜಗದೀಶ್ ಮುಖಂಡ ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.