ಕಾಲುವೆ ಒಡೆದು ಸೀಮಾಂದ್ರ ಪಾಲಾಗುತ್ತಿರುವ ನೀರು : ಗುಂಡಗಲ್ಲು ಗ್ರಾಮದ ರೈತರ ಆಕ್ರೊಶ
ಮಧುಗಿರಿ : ಕಳೆದ ಒಂದು ವರ್ಷದ ಹಿಂದೆ ಒಡೆದು ಕಾಲುವೆಯಿಂದ ಅಪಾರ ನೀರು ಪಕ್ಕದ ರಾಜ್ಯ ಸೀಮಾಂದ್ರ ಪಾಲಾಗುತ್ತಿದ್ದು ಈ ಭಾಗದ ರೈತರ ಆಕ್ರೊಶಕ್ಕೆ ಕಾರಣವಾಗಿದೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಲಿದೇವಪುರ ಗ್ರಾಮದಲ್ಲಿ ಗೌರಿಬಿದನೂರು ತಾಲ್ಲೂಕಿನ ಮೂಲಕ ಹರಿಯುವ ಕುಮಧ್ವತಿ ನದಿಯಿಂದ ಗುಂಡಗಲ್ಲು ಕೆರೆಗೆ ಹಾದು ಹೋಗುವ ಕಾಲುವೆ ಕಲಿದೇವಪುರ ಬಳಿ ಒಡೆದು, ಕೆರೆಗೆ ಹೋಗಬೇಕಾದ ಅಪಾರ ಪ್ರಮಾಣದ ನೀರು ರೈತರ ಜಮೀನುಗಳ ಮೂಲಕ ನುಗ್ಗಿ ಮತ್ತೆ ಕುಮಧ್ವತಿ ನದಿಗೆ ಹೋಗಿ ಆಂಧ್ರದತ್ತ ಸಾಗುತ್ತಿವೆ.
ಕಾಲುವೆ ಹಾನಿಯಾದ ಹಿನ್ನೆಲೆ ಹಲವು ದಿನಗಳಿಂದ ಕುಮಧ್ವತಿ ನದಿ ನೀರು ಆಂಧ್ರಕ್ಕೆ ಹೋಗುತ್ತಿದ್ದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾಗಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಗಮನಹರಿಸದೇ ಇರುವುದು ಗುಂಡಗಲ್ಲು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸತತ ಬರಗಲಾದಿಂದ ಕಂಗೆಟ್ಟಿರುವ ಈ ಭಾಗದ ಜನತೆ ಕೃಷಿ ಜತೆಗೆ ಕುಡಿಯುವ ನೀರಿಗೆ ಜನರು ಹಲವಾರು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚುನಾವಣೆ ಅಥವಾ ಹಲವು ಕಾರ್ಯಕ್ರಮಗಳಲ್ಲಿ ಆಗದಿರುವ ಕಾರ್ಯಗಳಾದ ಎತ್ತಿನಹೊಳೆ, ಭದ್ರ ಮೇಲ್ದಂಡೆ ಹಾಗೂ ಇತರೆ ನೀರಾವರಿ ಯೋಜನೆಗಳ ಬಗ್ಗೆ ಗಂಟೆ ಗಟ್ಟಲೇ ಭಾಷಣ ಬಿಗಿದು ಸುಳ್ಳು ಭರವಸೆ ಕೇಳಿ ಸಾಕಾಗಿದೆ ಎಂದು ಆಕ್ರೊಶ ವ್ಯಕ್ತ ಪಡಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಸಚಿವರಾದ ಜೆ.ಸಿ ಮಾಧುಸ್ವಾಮಿ ಇತ್ತೀಚಿಗೆ ಮಧುಗಿರಿಗೆ ಭೇಟಿ ನೀಡಿ ನಮ್ಮ ಇಲಾಖೆಯ ಯಾವುದೆ ಕೆರೆಗಳು ಅಪಾಯದಂಚಿನಲ್ಲಿ ಇಲ್ಲ ಇಂತಹ ಯಾವುದೆ ಸಮಸ್ಯೆ ಇದ್ದರು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರಕರ್ತರಿಗೆ ತರಾತುರಿಯಲ್ಲಿ ಮಾಹಿತಿ ನೀಡಿ ತೆರಳಿದ್ದರು ಆದರೆ ಪ್ರಕೃತಿ ಕೃಪೆಯಿಂದ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿದ್ದು ಗುಂಡಗಲ್ಲು ಗ್ರಾಮದ ಕೆರೆ ಕನಿಷ್ಠ ಅರ್ಧ ಭಾಗವು ಭರ್ತಿಯಾಗಿಲ್ಲ ಸರಕಾರ ಹಾಗೂ ಅಧಿಕಾರಿಗಳು ಇದರ ಬಗ್ಗೆ ಎಷ್ಟು ಕಾಳಜಿ ತೋರುತ್ತಿವೆ ಎಂಬುದು ಈ ಕಾಲುವೆ ಸಾಕ್ಷಿಯಾಗಿದ್ದು ಈ ಭಾಗದ ಕೆರೆಗಳಿಗೆ ಕಾಲುವೆಗಳನ್ನು ಸರಿಪಡಿಸಿ ನೀರನ್ನು ಸಂರಕ್ಷಿಸದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಇನ್ನಾದರೂ ಸಣ್ಣ ನೀರಾವರಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುಂಡಗಲ್ಲು ಪ್ರಗತಿ ಪರ ರೈತ ಆನಂದ ಕುಮಾರ್ ಮಾತನಾಡಿ ಎಲ್ಲಾ ಕೆರೆ ಕಟ್ಟೆಗಳು ತುಂಬಿದರು ಗುಂಡಗಲ್ಲು ಕರೆ ತುಂಬಿಲ್ಲ 3 ಪಕ್ಷದ ಜನಪ್ರತಿನಿಧಿಗಳು ಚುನಾಯಿತರಾಗಿದ್ದಾರೆ ಕನಿಷ್ಠ ಒಬ್ಬರಾದರೂ ನಮ್ಮ ಗ್ರಾಮದ ಕಡೆ ಕಾಳಜಿ ತೋರುತ್ತಿಲ್ಲ, ಇನ್ನೂ ಅಧಿಕಾರಿಗಳು ಕಾಲುವೆ ಒಡೆದು ವರ್ಷಗಳೇ ಕಳೆದರು ಅವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅತೀ ಶೀಘ್ರವಾಗಿ ಕೆರೆ ಕಾಲುವೆ ದುರಸ್ಥಿ ಮಾಡಿಸಲಿದ್ದಲ್ಲಿ ತಾಲ್ಲೂಕು ಕಚೇರಿಯ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕೆ. ಶ್ರೀಕಾಂತ್, ಕೆ.ಎಸ್. ಶ್ರೀರಾಮಪ್ಪ, ಅಶ್ವತ್ಥನಾರಾಯಣಪ್ಪ, ಕೆ.ಅಶ್ವತ್ಥಪ್ಪ, ಮಂಜುನಾಥ್, ಅಶ್ವತ್ಥಪ್ಪ, ನಾಗರಾಜು, ನರಸಿಂಹಮೂರ್ತಿ ಎಚ್ಚರಿಸಿದ್ದಾರೆ.
ಸಂಸದರು ಎಲ್ಲಿದ್ದಾರೆ ? ; ತಾಲ್ಲೂಕಿನಲ್ಲಿ ಇಷ್ಟೆಲ್ಲಾ ಅತಿವೃಷ್ಠಿ ಅನಾವೃಷ್ಟಿ ಸಂಭವಿಸುತಿದ್ದು ಕನಿಷ್ಠ ಒಂದು ಗ್ರಾಮಕ್ಕೂ ಸಂಸದರು ಭೇಟಿ ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಜನತೆ ಮತ ಹಾಕಿಲ್ಲವೇ, ಚುನಾವಣೆ ವೇಳೆ ಅಪ್ಪರ್ ಭಧ್ರ ಹೇಮಾವತಿ ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಉದ್ದುದ್ದ ಭಾಷಣ ಮಾಡಿದರೆ ಸಾಲದು ಕುಮದ್ವತಿ ನದಿ ಮೂಲಕ ಹರಿಯುವ ಕಾಲುವೆ ಪಕ್ಕದಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗು ಸರಕಾರಿ ಗೋಮಾಳವಿದ್ದು ಗುಂಡಗಲ್ಲು ಗ್ರಾಮದ ಕೆರೆ ತುಂಬಿದರೆ ಗೋಮಾಳಕ್ಕೆ ನೀರು ಬರುತ್ತದೆ ಎಂದು ಪ್ರಭಾವಿ ವ್ಯಕ್ತಿಗಳು ಕಾಲುವೆ ದುರಸ್ಥಿ ಮಾಡಿಸದೆ ಅಡ್ಡಿಪಡಿಸುತಿದ್ದಾರೆ ಎಂಬುದು ಇಲ್ಲಿನ ರೈತರ ಪ್ರಬಲ ಆರೋಪವಾಗಿದೆ.