ಪ್ರೊ.ಬರಗೂರು ರಾಮಚಂದ್ರಪ್ಪ ವಿರುದ್ಧದ ಪ್ರಕರಣ ರದ್ದುಪಡಿಸಿ : ಡಾ.ಪಿ.ಹೆಚ್.ಮಹೇಂದ್ರಪ್ಪ
ಶಿರಾದಲ್ಲಿ ವಿವಿಧ ಸಂಘಟನೆಗಳಿಂದ ತಹಶೀಲ್ದಾರ್‌ಗೆ ಮನವಿ
ಶಿರಾ : ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಭರತನಗರಿ ಕಾದಂಬರಿಯಲ್ಲಿ ರಾಷ್ಟçಗೀತೆಗೆ ಮತ್ತು ಗಂಗಾ ಮತಸ್ಥರ ದೇವತೆ ಗಂಗಾ ಮಾತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಚಲವಾದಿ ನಾರಾಯಣಸ್ವಾಮಿ ಅವರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರನ್ನು ರದ್ದುಪಡಿಸಬೇಕೆಂದು ವಿವಿಧ ಸಂಘಟನೆಗಳಿಂದ ಬುಧವಾರ ತಹಶೀಲ್ದಾರ್ ಮಮತ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಡಾ.ಪಿ.ಹೆಚ್.ಮಹೇಂದ್ರಪ್ಪ ಅವರು ಪ್ರೋ. ಬರಗೂರು ರಾಮಚಂದ್ರಪ್ಪ ಅವರು ನಮ್ಮ ನಾಡು ಕಂಡ ಸಾಂಸ್ಕೃತಿಕ ಅನನ್ಯತೆಯನ್ನು ಪಡೆದ ಪ್ರಸಿದ್ಧ ಲೇಖಕರು, ರಾಜ್ಯ, ರಾಷ್ಟç ಮತ್ತು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದವರು ಹಾಗೂ ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅಂತರ್ ರಾಷ್ಟ್ರೀಯಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು ಪ್ರತಿಭೆಯ ವ್ಯಕ್ತಿಯ ಮೇಲೆ ಕೊಟ್ಟಿರುವ ದೂರಿನಲ್ಲಿ ಸತ್ಯಾಂಶವಿಲ್ಲ. ಪ್ರೋ. ಬರಗೂರು ರಾಮಚಂದ್ರಪ್ಪ ಅವರು ಭರತನಗರಿ ಕಾದಂಬರಿಯನ್ನು ನಾಲ್ಕು ದಶಕಗಳ ಹಿಂದೆ ಬರೆದಿದ್ದರು. ಅದೊಂದು ರಾಜಕೀಯ ವಿಡಂಬನೆಯ ರೂಪಕಾತ್ಮಕ ಕಾದಂಬರಿ. ಸೃಜನಶೀಲ ಕೃತಿಗಳನ್ನು ಕೇವಲ ವಾಚ್ಯಾರ್ಥದಲ್ಲಿ ನೋಡಲಾಗದು. ಈ ಕಾದಂಬರಿಯಲ್ಲಿ ಅನೇಕ ಮನೋಧರ್ಮದ ಅನೇಕ ನಡವಳಿಕೆಯ ಪಾತ್ರಗಳು ಬರುತ್ತವೆ. ಲೇಖಕರು ಆಯಾ ಪಾತ್ರದ ಮನೋಧರ್ಮಕ್ಕೆ ಅನುಗುಣವಾದ ಮಾತುಗಳನ್ನು ಬರೆಯಬೇಕಾಗುತ್ತದೆ. ಅದರಂತೆ ಈ ಕಾದಂಬರಿಯ ಒಂದು ಪಾತ್ರವು ರಾಷ್ಟçಗೀತೆಯ ದಾಟಿಯಲ್ಲಿ ದೇಶದ ಸ್ಥಿತಿಯನ್ನು ವಿಡಂಬಿಸುತ್ತದೆ. ಆದರೆ ರಾಷ್ಟçಗೀತೆಯ ಆಶಯವನ್ನು ಎಲ್ಲಿಯೂ ವಿರೋಧಿಸಿರುವುದಿಲ್ಲ. ವಿಡಂಬಿಸುವುದಿಲ್ಲ. ಈ ಬಗ್ಗೆ ಪ್ರೋ. ಬರಗೂರರು ಈಗಾಗಲೇ ಬಹಿರಂಗ ಸ್ಪಷ್ಟನೆ ನೀಡಿದ್ದು ಅಂಥ ಯಾವ ಉದ್ದೇಶವೂ ತನಗಿಲ್ಲವೆಂದೂ ಜನರಿಗೆ ತಪ್ಪು ಭಾವನೆ ಉಂಟು ಮಾಡಿದ್ದರೆ ವಿಷಾಧಿಸುವುದಾಗಿಯೂ ಹೇಳಿದ್ದಾರೆ.
ಆದ್ದರಿಂದ ಪ್ರೋ. ಬರಗೂರು ರಾಮಚಂದ್ರಪ್ಪ ಅವರ ಮೇಲೆ ನೀಡಿರುವ ದೂರನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಿ.ಎಸ್.ಕೃಷ್ಣಮೂರ್ತಿ, ಮಾನವ ಬಂಧುತ್ವ ವೇದಿಕೆಯ ಸಂಚಾಲಕ ರಂಗರಾಜು, ಪ್ರೋ. ಬರಗೂರು ಮೇಸ್ಟುç ಬಳಗದ ಹೆಂದೊರೆ ಶಿವಣ್ಣ, ನವೋದಯ ಯುವ ವೇದಿಕೆಯ ಅಧ್ಯಕ್ಷ ಜಯರಾಮಕೃಷ್ಣ, ದೇವರಾಜು ಸೇರಿದಂತೆ ಹಲವರು ಹಾಜರಿದ್ದರು.