ಮಳೆ ತೀವ್ರತೆ ಹೆಚ್ಚುತ್ತಿದ್ದು ನಾಗರೀಕರು ಎಚ್ಚರಿಕೆವಹಿಸಿರಿ : ಶಾಸಕ ಮಸಾಲಜಯರಾಮ್
ತುರುವೇಕೆರೆ : ತಾಲೂಕಿನಾದ್ಯಂತ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದ್ದು ಹಳ್ಳ ಕೊಳ್ಳಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಜನತೆ ಎಚ್ಚರಿಕೆಯಿಂದ ಇರುವಂತೆ ಶಾಸಕ ಮಸಾಲಜಯರಾಮ್ ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ಸತತ ಮಳೆ ಸುರಿದ ಪರಿಣಾಮ ತಾಲೂಕಿನಾದ್ಯಂತ ಅನೇಕ ಅವಘಡಗಳು ಸಂಭವಿಸಿದ್ದವು. ಕೊಂಡಜ್ಜಿ ಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದರು. ಮತ್ತೆ ಮಳೆ ಹೆಚಾಗಿ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಂತೆ ಇದೀಗ ಮಳೆ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೀಳಲಾರಂಭಿಸಿದೆ. ಪರಿಣಮವಾಗಿ ತೋಟ ತುಡಿಕೆ ಹಾಗೂ ಬಯಲು ಪ್ರದೇಶಗಳು ಜಲವೃತಗೊಂಡಿವೆ. ಕೆರೆಕಟ್ಟೆ ಹಳ್ಳಕೊಳ್ಳಗಳಲ್ಲಿ ಬಿರುಸಿನೊಂದಿಗೆ ಹರಿಯುತ್ತಿರುವ ನೀರಿನೊಂದಿಗೆ ಸಾಹಸ ಮಾಡಲು ನಾಗರೀಕರು ಮುಂದಾಗಬಾರದು, ಮಳೆಯ ತೀವ್ರತೆಗೆ ಮನೆಗಳ ಗೋಡೆ ಕುಸಿಯುತ್ತಿದ್ದು ಸುರಕ್ಷಿತವಾಗಿರುವ ಕಡೆಗೆ ಜನತೆ ಸ್ಥಳಾಂತರಗೊಳ್ಳುವಂತೆ ತಿಳಿಸಿದರು.
ಮಳೆಯ ತೀವ್ರತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಸಹಾಯವಾಣಿ ಆರಂಭಿಸಿದ್ದಾರೆ. ಅಗತ್ಯ ನೆರವು ಬೇಕಿದ್ದವರು ತಹಶೀಲ್ದಾರ್ ಕಚೇರಿಯ ದೂರವಾಣಿ ಸಂಖ್ಯೆ 08139-287325 ಗೆ ಕರೆ ಮಾಡಿ, ಮಳೆಯ ತೀವ್ರತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನತೆ ಅಹವಾಲನ್ನು ಆಲಿಸುವಂತೆ ಸೂಚನೆ ನೀಡಲಾಗಿದೆ. ತುರ್ತು ಸಹಾಯದ ಅಗತ್ಯ ಕಂಡುಬಂದರೇ ನಾಗರೀಕರು ನನ್ನನ್ನು ಸಂಪರ್ಕಿಸಿ, ನಿಮ್ಮ ಸಂಕಷ್ಟಕ್ಕೆ ಧ್ವನಿಯಾಗುವೆ ಎಂದು ತಿಳಿಸಿದರು.