ದೇಶದ ಉನ್ನತಿಗೆ ಶಿಕ್ಷಣವೇ ಮೂಲ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ಶಿರಾದಲ್ಲಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಆಚರಣೆ
ಶಿರಾ : ಈ ದೇಶದ ಉನ್ನತಿಗೆ ಶಿಕ್ಷಣವೇ ಮೂಲ. ಅಂತಹ ಶಿಕ್ಷಣ ನೀಡುವ ಶಿಕ್ಷಕರು ಚಿಂತನಾಶೀಲರಾಗಬೇಕು, ವಿದ್ಯಾರ್ಥಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಾಯಿಯನ್ನು ಮೊದಲ ಗುರು ಎಂದು ಭಾವಿಸಿದರೆ ಎರಡನೆ ಅತಿ ಮುಖ್ಯ ಸ್ಥಾನ ಶಿಕ್ಷಕನಿಗೆ ಸಲ್ಲುತ್ತದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಹಲವು ವಿಷಯಗಳನ್ನು ಅಧ್ಯಯನ ಮಾಡಿದ್ದರು. ಶಿಕ್ಷಕ ವರ್ಗಕ್ಕೆ ಸಮಾಜದಲ್ಲಿ ಸ್ಥಾನಮಾನ ತಂದಿತ್ತ ಮಹಾನ್ ಶಿಕ್ಷಕರಾಗಿದ್ದರು. ಅವರ ಆದರ್ಶ ತತ್ವದ ಮಾರ್ಗದರ್ಶನದಲ್ಲಿ ನಡೆಯುವುದೇ ನಿಜವಾದ ಗುರು ನಮನ. ಇಚ್ಛಾಶಕ್ತಿ, ಕ್ರಿಯಾಶೀಲತೆ, ಪರಿಶ್ರಮ ಇವೆಲ್ಲವೂ ಕೂಡ ಜೊತೆಯಾದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಮಾದರಿಯಾಗಿದ್ದಾರೆ. ಶಿಕ್ಷಣದಲ್ಲಿ ಅಪಾರ ಕೊಡುಗೆಯನ್ನು ನೀಡಿ. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟçಪತಿಗಳಾಗಿ ಶಿಕ್ಷಕರಿಗೆ ಗೌರವ ಸಲ್ಲಿಸಬೇಕು ಎಂಬ ಉದ್ದೇಶದಿಂದ ತಮ್ಮ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು. ಘೋಷಣೆ ಮಾಡಿದ ಮಹಾನ್ ನಾಯಕರು ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ರೂವಾರಿಗಳು ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಂರಕ್ಷಕರು ತಮ್ಮ ಬೋಧನೆಯ ಮೂಲಕ ಶಿಷ್ಯರನ್ನು ಸಾಧನೆಯ ಹಾದಿಯಲ್ಲಿ ನಡೆಸಿದ, ಪ್ರತಿಯೊಬ್ಬರ ಬಾಳನ್ನು ಬೆಳಗಿಸಿದ, ಉತ್ತಮ ನಡೆ ನುಡಿಗಳನ್ನು ಕಲಿಸಿದ, ಜ್ಞಾನವನ್ನು ತುಂಬಿದ, ಎಲ್ಲರ ಬದುಕಿನ ದಾರಿ ದೀಪಗಳಾಗಿರುವ ಸಮಸ್ತ ಶಿಕ್ಷಕ ವೃಂದದವರಿಗೆ ಶಿಕ್ಷಕರ ದಿನಾಚರಣೆಯ ಶುಭ ಕೋರಿ, ಗುರುಪರಂಪರೆಯನ್ನು ಅಳವಡಿಸಿಕೊಂಡು ಪೂಜಿಸಿಕೊಂಡು ಬರುತ್ತಿರುವ ದೇಶ ನಮ್ಮದು. ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿ ಶಿಕ್ಷಕರಿಗೆ ಸಲ್ಲುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಮತ.ಎಂ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಉಪಾಧ್ಯಕ್ಷೆ ಅಂಬುಜಾ ನಟರಾಜ್, ಕಾಡುಗೊಲ್ಲ ಅಭಿವೃಧ್ದಿ ನಿಗಮದ ಅಧ್ಯಕ್ಷ ಚಂಗವಾರ ಮಾರಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮಿಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ನೇಜಂತೆ ರಾಮಣ್ಣ, ಹಿಮಂತರಾಜು, ಚಂದ್ರಶೇಖರ್, ಆರ್.ಸಿ.ರಾಮಚಂದ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.