ಮಳೆರಾಯನ ಅಬ್ಬರಕ್ಕೆ ತುರುವೇಕೆರೆ ಜನತೆ ತತ್ತರ: ಕುಸಿದು ಬಿದ್ದ ಮನೆ ಗೋಡೆಗಳು

ತುರುವೇಕೆರೆ : ತಾಲೂಕಿನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆರಾಯನ ಅಬ್ಬರಕ್ಕೆ ತತ್ತರಗೊಳ್ಳುವಂತಾಗಿದ್ದು.ಭಾನುವಾರ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ 6 ಮನೆಗಳ ಗೋಡೆಗಳು ಕುಸಿದಿದ್ದು, ಕೆಲ ರಸ್ತೆಗಳು, ಪೆಟ್ರೋಲ್ ಬಂಕ್ ಹಾಗೂ ಡಾಬಾ ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ತಾಲೂಕಿನ ಹಿರೇಡೊಂಕಿಹಳ್ಳಿಯ ಶಾರದಮ್ಮ , ಕಳ್ಳನಕೆರೆಯ ವಿರುಫಾಕ್ಷಯ್ಯ, ಲೋಕೇಶ್, ತಳಕೆರೆಯ ತಿಮ್ಮಪ್ಪ. ನೇರಲಕಟ್ಟೆ ಗೊಲ್ಲರಹಟ್ಟಿಯ ಜುಂಜಮ್ಮ ಎಎಂಬುವರಿಗೆ ಸೇರಿದ ವಾಸದ ಮನೆಗಳ ಗೋಡೆಗಳು ಕುಸಿದು ಬಿದ್ದ ಪರಿಣಾಮ ಆಸರೆ ಕಳೆದುಕೊಂಡ ನಿವಾಸಿಗಳು ಅತಂತ್ರರಾಗಿದ್ದಾರೆ. ಉದರ ಪೋಷಣೆಗೆ ಮನೆಗಳಲ್ಲಿ ದಾಸ್ತಾನು ಮಾಡಲಾಗಿದ್ದ ದವಸ, ಧಾನ್ಯಗಳೆಲ್ಲವೂ ನೀರು ಪಾಲಾಗಿದ್ದು ನಿವಾಸಿಗಳನ್ನು ಚಿಂತೆಗೆ ದೂಡಿದೆ. ನಷ್ಟದ ಪ್ರಮಾಣ ಅಧಿಕೃತವಾಗಿ ಅಧಿಕಾರಿಗಳ ಸ್ಥಳ ಪರಿಶೀಲನೆಯಿಂದ ತಿಳಿದು ಬರಬೇಕಿದೆ.
ಪಟ್ಟಣದ ಮಾಳೆ ಸಮೀಪದ ಮಾಯಸಂದ್ರ ರಸ್ತೆ, ಪೆಟ್ರೋಲ್ ಬಂಕ್ ಹಾಗೂ ಆಶುಪಾಸಿನ ತೆಂಗಿನ ತೋಟಗಳಲ್ಲಿ ನುಗ್ಗಿದ ಪಾರ ಪ್ರಮಾಣದ ನೀರಿನಿಂದ ವಾಹನಗಳು ಹಾಗೂ ಜನ ಸಂಚಾರಕ್ಕೆ ಕೆಲ ಕಾಲ ತೊಂದರೆಯುಂಟಾಗಿತ್ತು. ಮಲ್ಲಾಘಟ್ಟ ಹಾಗೂ ತುರುವೇಕೆರೆ ಅಮಾನಿಕೆರೆಯ ಕೋಡಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಹಳ್ಳ, ಕೆರೆ ಕಟ್ಟೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನಲೆಯಲ್ಲಿ ನಾಗರೀಕರು ಮನೆಯಿಂದ ಹೊರ ಬರಲು ಆತಂಕ ಪಡುತ್ತಿದ್ದಾರೆ,. ರಾತ್ರಿಯಾದರೇ ಸಾಕು ಬೋರ್ಗರೆಯುವ ಮಳೆಯ ಅಬ್ಬರ ನಾಗರೀಕರ ನೆಮ್ಮದಿಗೆ ಭಂಗ ತಂದಿದೆ. ಹಳೆಯ ಮಣ್ಣಿನ ಮನೆಗಳಲ್ಲಿ, ತೋಟಗಳಲ್ಲಿ ವಾಸಿಸುವ ಮಂದಿ ಭಯಭೀತರಾಗಿದ್ದಾರೆ.
ಭಾನುವಾರು ರಾತ್ರಿ ತಾಲೂಕಿನ ವ್ಯಾಪ್ತಿಯ ತುರುವೆಕೆರೆಯಲ್ಲಿ 76.8 ಮಿ,ಮೀ, ದಂಡಿನಶಿವರದಲ್ಲಿ 120.2 ಮಿ,ಮೀ,ಮಾಯಸಂದ್ರದಲ್ಲಿ 108.8 ಮಿ,ಮೀ,ದಬ್ಬೆಘಟ್ಟದಲಲಿ 30.2, ಮಿ,ಮೀ, ಸಂಪಿಗೆಯಲ್ಲಿ 34.2 ಮಳೆ ಬಿದ್ದಿದ್ದು ಸರಾಸರಿ 74.04 ಮಳೆ ಬಿದ್ದಿರುವುದಾಗಿ ಕಂದಾಯ ಇಲಾಖೆ ಮಾಹಿತಿ ನೀಡಿದೆ.