ಹುಳಿಯಾರಿನಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ನೂಕುನುಗ್ಗಲು
ಹುಳಿಯಾರು: ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರಿಂದ ದಿಢೀರ್ ಬೇಡಿಕೆ ಹೆಚ್ಚಿದ್ದು ಹಳ್ಳಿಗಳ್ಳಿಗಳಿಂದ ಮುಂಜಾನೆಯೇ ಯೂರಿಯಾ ಖರೀಧಿಗೆ ರಾಗಿ ಬೆಳೆಗಾರರು ಹುಳಿಯಾರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.
ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ರಾಗಿ ಇಲ್ಲಿನ ವಾಣಿಜ್ಯ ಬೆಳೆಯಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಉತ್ತಮ ಮಳೆಯಾಗಿ ರಾಗಿ ರೈತನ ಕೈ ಹಿಡಿದಿರುವುದು ಈ ವರ್ಷ ರಾಗಿ ಬಿತ್ತನೆಗೆ ರೈತರು ಅತ್ಯುತ್ಸಾಹ ತೋರಿದ್ದಾರೆ. ಪರಿಣಾಮ ಸಾವಿರಾರು ಹೆಕ್ಟರ್ ರಾಗಿ ಬಿತ್ತನೆಯಾಗಿದ್ದು ಬಳೆಯೂ ಸಹ ಹುಲುಸಾಗಿ ಬೆಳೆದಿದ್ದು ಯೂರಿಯ ರಸಗೊಬ್ಬರದ ಅಗತ್ಯವಿದೆ. ಆದರೆ ವಾರದಿಂದ ನಿತ್ಯ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರೈತರು ಪಟ್ಟಣಕ್ಕೆ ಬಂದು ಗೊಬ್ಬರ ಖರೀಧಿಸಲು ಸಾಧ್ಯವಾಗಿರಲಿಲ್ಲ. ಈಗ ಎರಡ್ಮರು ದಿನಗಳಿಂದ ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಕ್ಕಾಗಿ ಗೊಬ್ಬರದಂಗಡಿಗಳಿಗೆ ನಿತ್ಯ ಅಲೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಖಾಸಗಿ ಗೊಬ್ಬರದಂಗಡಿಗಳಲ್ಲಿ ಇನ್ನೂ ಯೂರಿಯಾ ದಾಸ್ತಾನು ಆಗದಿರುವುದರಿಂದ ರೈತರು ಬೆಳಗ್ಗೆಯಿಂದ ಸಂಜೆವರೆವಿಗೂ ಕಾದು ಇದೂವರೆವಿಗೂ ಬರಿಗೈಯಲ್ಲಿ ಹಿಂದಿರುಗುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಇಲ್ಲಿನ ವಿಎಸ್‌ಎಸ್‌ಎನ್ ಸೊಸೈಟಿಗೆ ಗೋಬ್ಬರದ ಲೋಡ್ ಬಂದ ವಿಷಯ ಕಾಡ್ಗಿಚ್ಚಿನಂತೆ ಹರಡಿತ್ತು. ಪರಿಣಾಮ ಲಾರಿಯಿಂದ ಸೊಸೈಟಿಗೆ ಗೊಬ್ಬರ ಅನ್‌ಲೋಡ್ ಆಗುವಷ್ಟರಲ್ಲಿ ಆಂಜನೇಯದ ಬಾಲದಂತೆ ರೈತರ ಸರತಿ ಸಾಲು ನಿಂತಿತು. ಪ್ರತಿಯೊಬ್ಬ ರೈತರೂ ಆಧಾರ್ ಕಾರ್ಡ್ ಹಿಡಿದು ಗೊಬ್ಬರಕ್ಕಾಗಿ ನೂಕುನುಗ್ಗಲು ಸೃಷ್ಠಿಸಿದರು.
ಒಬ್ಬ ರೈತನಿಗೆ ಒಂದೇ ಚೀಲ ಗೊಬ್ಬರ ಕೊಡುವುದಾಗಿ ಸೊಸೈಟಿ ಕಾರ್ಯದರ್ಶಿ ತಿಳಿಸಿದ್ದ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲಾ ಆಧಾರ್ ಕಾರ್ಡ್ ಹಿಡಿದು ಸಾಲಿನಲ್ಲಿ ನಿಂತು ಖರೀದಿಗೆ ಮುಗಿ ಬಿದ್ದರು. ಪರಿಣಾಮ ಸೊಸೈಟಿಗೆ ಬಂದಿದ್ದ 22.5 ಟನ್ ಯೂರಿಯ ಕೇವಲ ಎರಡು ಗಂಟೆಯೊಳಗೆ ಖಾಲಿಯಾಗಿ ತಡವಾಗಿ ಬಂದ ರೈತರು ಬೇಸರದಿಂದ ಹಿಂದಿರುಗಿದರು. ಅಲ್ಲದೆ ಬಿತ್ತನೆಗೆ ಅಗತ್ಯವಾದ ರಸಗೊಬ್ಬರ ಹೋಬಳಿಯಲ್ಲಿ ಇನ್ನೂ ದಾಸ್ತಾನಿಲ್ಲದಿರುವುದರಿಂದ ಯೂರಿಯಾಕ್ಕೆ ಕೃತಕ ಅಭಾವ ಸೃಷ್ಠಿಯಾಗಿದ್ದು ಕೃಷಿ ಅಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಯೂರಿಯ ದಾಸ್ತಾನಿಡಲು ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.