ಶೀಘ್ರದಲ್ಲಿ ಕಳ್ಳಂಬೆಳ್ಳ ಬಳಿ ಹೈಟೆಕ್ ನಂದಿನಿ ಪಾರ್ಲರ್ ಸ್ಥಾಪನೆ : ಎಸ್.ಆರ್.ಗೌಡ
ಶಿರಾ ನಂದಿನಿ ಕ್ಷೀರ ಭವನದಲ್ಲಿ ತಾಲ್ಲೂಕು ಮಟ್ಟದ ಪ್ರಾದೇಶಿಕ ಸಭೆ
ಶಿರಾ : ತುಮಕೂರು ಹಾಲು ಒಕ್ಕೂಟದ ಸುಮಾರು 72 ಉತ್ಪನ್ನಗಳನ್ನು ಮಾರಾಟ ಮಾಡಲು ತಾಲ್ಲೂಕಿನ ಕಳ್ಳಂಬೆಳ್ಳ ಟೋಲ್ ಬಳಿ ಹೈಟೆಕ್ ಪಾರ್ಲರ್ ಸ್ಥಾಪಿಸಲು ಒಕ್ಕೂಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಅನುಮೊದಿಸಿ ಕೆ.ಎಂ.ಎಫ್.ಗೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ತಾಲ್ಲೂಕಿನ ಹೈನುಗಾರರಿಗೆ ಸಿಹಿ ಸುದ್ದಿ ಸಿಗಲಿದೆ ಎಂದು ರಾಜ್ಯ ರೇಷ್ಮೆ ಉದ್ಯಮದ ಮಾಜಿ ಅಧ್ಯಕ್ಷರೂ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಹೇಳಿದರು.
ಅವರು ನಗರದ ಚಂಗಾವರ ರಸ್ತೆಯಲ್ಲಿರುವ ನಂದಿನ ಕ್ಷೀರಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿರಾ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ತಾಲ್ಲೂಕು ಮಟ್ಟದ ಪ್ರಾದೇಶಿಕ ಸಭೆ ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಅತಿ ಹೆಚ್ಚು ದರವನ್ನು ಹಾಲು ಉತ್ಪಾದಕರಿಗೆ ನೀಡುತ್ತಿರುವುದು ತುಮಕೂರು ಹಾಲು ಒಕ್ಕೂಟ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಾಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಹೈನುಗಾರರ ಹಿತಾಸಕ್ತಿ ಕಾಪಾಡಬೇಕು ಅವರಿಗೆ ಆರ್ಥಿಕ ಶಕ್ತಿ ತುಂಬಬೇಕು ಎಂಬುದೇ ಒಕ್ಕೂಟದ ಉದ್ದೇಶ
ಹೈನುಗಾರರಿಗೆ ತೊಂದರೆಯಾದರೆ ಅದು ನಮ್ಮ ಸಮಸ್ಯೆ ಎಂದು ಭಾವಿಸುತ್ತೇವೆ. ಹಾಲು ಉತ್ಪಾದಕರ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮ ಉದ್ದೇಶ. ಹಾಲಿನ ಉತ್ಪಾದನೆಯಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಹಾಲು ಉತ್ಪಾದಕರ ಸಮಸ್ಯೆಗಳನ್ನು ಸರಿಪಡಿಸಲು ಹಲವಾರು ರೀತಿಯಲ್ಲಿ ಕ್ರಮ ಕೈಗೊಂಡಿದ್ದೆವೆ. ಇಂದು ವಿವಿಧ ಕಾರ್ಯಕ್ರಮಗಳಡಿ ಸುಮಾರು 50 ಲಕ್ಷ ರೂಗಳ ಅನುದಾನವನ್ನು ಹೈನುಗಾರರಿಗೆ ನೀಡುತ್ತಿದ್ದೇವೆ ಎಂದರು.
ತುಮಕೂರಿನಲ್ಲಿ ಮೆಗಾ ಡೇರಿ: ಸುಮಾರು 175 ಕೋಟಿ ರೂ. ವೆಚ್ಚದಲ್ಲಿ ತುಮಕೂರಿನಲ್ಲಿ ಮೆಗಾ ಡೇರಿ ಮಾಡಲು ತೀರ್ಮಾನ ಮಾಡಲಾಗಿದೆ. ಇದರಿಂದ ಹೈಟೆಕ್ ಮಾದರಿಯಲ್ಲಿ ಹಾಲನ್ನು ಶುದ್ಧೀಕರಿಸಿ ಮಾರಾಟ ಮಾಡಲಾಗುವುದು. ಇದರಿಂದ ಒಕ್ಕೂಟಕ್ಕೆ ಹೆಚ್ಚಿನ ಲಾಭ ಬರುತ್ತದೆ. ಲಾಭ ಹೆಚ್ಚಾದರೆ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಕೊಡಲು ಸಾಧ್ಯವಾಗುತ್ತದೆ ಎಂದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ ಪ್ರತಿ ತಾಲ್ಲೂಕಿನಲ್ಲಿ ಪ್ರಾದೇಶಿಕ ಸಭೆ ಮಾಡಿ ಹೈನುಗಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದು ನಮ್ಮ ಉದ್ದೇಶ. ಕಳೆದ ಜನವರಿಯಿಂದ ಮಾರ್ಚ್ ವರೆಗೆ ಒಕ್ಕೂಟದಲ್ಲಿ ಹಾಲಿನ ಗುಣಮಟ್ಟ ಕೇವಲ ಶೇ. 64 ಬಂದಿದೆ. ಹಾಲಿನ ಗುಣಮಟ್ಟ ಕಡಿಮೆಯಾಗಿದ್ದರಿಂದ ಕೆಎಂಎಫ್‌ನಲ್ಲಿ ಸಭೆ ಮಾಡಿ ಗುಣಮಟ್ಟ ಕಡಿಮೆಯಾಗಲು ರಾಸುಗಳಿಗೆ ಉತ್ತಮ ಆಹಾರ ನೀಡಲು ಪ್ರೋತ್ಸಾಹದಾಯಕ ಯೋಜನೆ ರೂಪಿಸುತ್ತಿದ್ದೇವೆ. ರೈತರಿಗೆ ತರಬೇತಿ ನೀಡಲು ಸಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ಸಿ.ಸುರೇಶ್, ಪ್ರಸಾದ್, ತಾ.ಪಂ. ಮಾಜಿ ಉಪಾಧ್ಯಕ್ಷ ರಂಗನಾಥ್ ಗೌಡ, ನಗರಸಭೆಯ ಮಾಜಿ ಸದಸ್ಯ ನಟರಾಜ್, ತುಮಕೂರು ಹಾಲು ಒಕ್ಕೂಟದ ಶಿರಾ ಉಪ ವ್ಯವಸ್ಥಾಪಕ ಮಧುಸೂಧನ್, ವಿಸ್ತರಣಾಧಿಕಾರಿ ದಿವಾಕರ್, ಸಮಾಲೋಚಕ ಪ್ರವೀಣ್, ಸುಧಾಕರ್ ಗೌಡ, ಈರಣ್ಣ, ಡಾ.ಹರ್ಷ, ಡಾ.ಶ್ರೀಕಾಂತ್ ಸೇರಿದಂತೆ ಹಲವರು ಹಾಜರಿದ್ದರು.