ಮುರುಘಾ ಶ್ರೀ ಹಾಗೂ ಮಾದಾರ ಚೆನ್ನಯ್ಯ ಸ್ವಾಮೀಜಿ ಪೀಠ ತ್ಯಜಿಸಲು ದ.ಸಂ.ಸ. ಆಗ್ರಹ
ತುರುವೇಕೆರೆ : ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಮುರಾಘಶ್ರೀಗಳು ಕೂಡಲೇ ಪೀಠ ತ್ಯಾಗ ಮಾಡಬೇಕು ಎಂದು ದ.ಸಂ.ಸ ಸಂಚಾಲಕ ದಂಡಿನಶಿವರ ಕುಮಾರ್ ಒತ್ತಾಯಿಸಿದ್ದಾರೆ.
ಪಟ್ಣಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಅಮಾಯಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಸ್ವಾಮೀಜಿಯ ನಡೆ ಅಕ್ಷಮ್ಯ, ಇಡೀ ಸಂತರ ಪರಂಪರೆಯೇ ಇವರ ನಡೆಯಿಂದ ತಲೆ ತಗ್ಗಿಸುವಂತಾಗಿದ್ದು ಸನ್ಯಾಸಿಗಳನ್ನು ಅನುಮಾನಸ್ಪದವಾಗಿ ನೋಡುವಂತ ಸ್ಥಿತಿಗೆ ಮುರುಘಾ ಶ್ರೀಗಳು ಕಾರಣೀಭೂತರಾಗಿದ್ದಾರೆ. ಮುರುಘಾ ಶ್ರೀಗಳ ಅಮಾನವೀಯ ನಡೆ ಮೃಗೀಯ ವರ್ತನೆ ಸಹಿಸಲಾಗದು ಎಂದು ಕಿಡಿ ಕಾರಿದ ಅವರು. ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕಿಯರು ಇವರ ಹೀನಕೃತ್ಯಕ್ಕೆ ಬಳಕೆಯಾಗಿದ್ದಾರೆಂಬುದು ಅತ್ಯಂತ ನೋವಿನ ಸಂಗತಿ ಎಂದರು.
ಮಾದಾರ ಚೆನ್ನಯ್ಯ ಸ್ವಾಮೀಜಿ ತಾನೂ ಸಹ ದಲಿತನೆಂಬುದು ಮರೆತಿದ್ದಾರೆ. ದಲಿತ ಹೆಣ್ಣುಮಕ್ಕಳಿಗಾಗಿರುವ ಅನ್ಯಾಯವನ್ನು ಖಂಡಿಸದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಸನ್ಯಾಸಿಯಂತೆ ಮಾತನಾಡುವ ಮಾದಾರಚನ್ನಯ್ಯ ಆರ್.ಎಸ್.,ಎಸ್. ಮುಖವಾಣಿಯಂತೆ ಕೆಲಸ ಮಾಡುತ್ತಿರುವ ದ್ರೋಹಿ, ದಲಿತರ ಸ್ವಾಮೀಜಿ ಎಂದು ಪೋಷಾಕು ತೊಟ್ಟಿರುವ ಮಾದಾರ ಚನ್ನಯ್ಯ ಸಹ ಪೀಠ ತ್ಯಜಿಸಲಿ, ಅಘೋಷಿತ ಸ್ವಾಮೀಜಿಯಾಗಿ ಐಷಾರಾಮಿ ಬದುಕು ನಡೆಸುತ್ತಿರುವ ಮಾದಾರ ಚನ್ನಯ್ಯ ಖಾವಿ ಕಳಚಿ ರಾಜಕಾರಣ ಮಾಡಲಿ, ಬಸವಾದಿ ಶರಣರ ಆಶಯಗಳನ್ನು ಮಣ್ಣು ಪಾಲು ಮಾಡುತ್ತಿರುವ ಮಾದಾರ ಚೆನ್ನಯ್ಯ ಆರ್.ಎಸ್.ಎಸ್. ಭಟ್ಟಂಗಿ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ಹನುಮಂತಯ್ಯ, ಗ್ರಾ.ಪಂ. ಅಧ್ಯಕ್ಷ ಜಾಬೀರ್ ಹುಸೇನ್, ಜೆ.ಡಿ.ಎಸ್. ಎಸ್ಸಿ ಘಟಕದ ಅಧ್ಯಕ್ಷ ಮಲ್ಲೂರು ತಿಮ್ಮೇಶ್, ಛಲವಾದಿ ಮಹಾಸಭಾದ ರಾಮಯ್ಯ, ಜಗದೀಶ್, ಬಡಾವಣೆ ಶಿವರಾಜ್,ಗೋವಿಂದರಾಜ್, ಮತ್ತಿತರಿದ್ದರು.