ಜಗ್ಗೇಶ್ ಮನೆಗೆ ನುಗ್ಗಿದ ನೀರು: ಸ್ಥಳಕ್ಕೆ ದೌಡಾಯಿಸಿದ ತಾಲ್ಲೂಕು ಆಡಳಿತ
ತುರುವೇಕೆರೆ : ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರ ಸ್ವಗ್ರಾಮ ಮಾಯಸಂದ್ರದ ಮನೆಗೆ ಶನಿವಾರ ರಾತ್ರಿ ಮಳೆ ನುಗ್ಗಿದ್ದ ಹಿನ್ನಲೆಯಲ್ಲಿ ದೌಡಾಯಿಸಿದ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಕುರಿತು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಟ್ವೀಟ್ ಮಾಡಿ “ ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ, ಬಹುತೇಕ ಜನರು ನೀರು ಹರಿಯುವ ಸರಕಾರಿ ಜಾಗದಲಿ ಮನೆ ಕಟ್ಟಿ ನೀರು ಹರಿಯುವ ಹೊಂಡಗಳನ್ನು ಮುಚ್ಚಿದ್ದಾರೆ, ಮಾಯಸಂದ್ರದ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತಿದೆ, ಗಮನ ಹರಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಟ್ವೀಟ್‌ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರು ನೀರಾವರಿ ನಿಗಮದ ಎಂಜಿನಿಯರ್ ಮದುಸೂಧನ್ ಹಾಗೂ ಸರ್ವೇ ಇಲಾಖೆಯ ನಟೇಶ್ ಅವರೊಂದಿಗೆ ಸ್ಥಳಕ್ಕೆ ದೌಡಾಯಿಸಿದರು.
ಆನಂತರ ಪತ್ರಿಕೆಯೊಂಧಿಗೆ ಮಾತನಾಡಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಮನೆಯ ಸನಿಹದಲ್ಲಿ ಹಳ್ಳವೊಂದಿದೆ. ಹಳ್ಳದಲ್ಲಿ ಬಾರಿ ಗಾತ್ರದ ಮರಗಳು , ಗಿಡಗಳು ಬೆಳೆದಿದ್ದು ಮಳೆಯ ನೀರು ಸರಾಗವಾಗಿ ಹರಿಯಲು ಸಾದ್ಯವಾಗದೇ ಎತ್ತರದ ಪ್ರದೇಶದಲ್ಲಿರುವ ಜಗ್ಗೇಶ್ ಅವರ ಮನೆಗೆ ನೀರು ನುಗ್ಗಿದೆ. ಮಳೆ ನೀರು ಹಳ್ಳಧಲ್ಲಿ ಹರಿಯುತ್ತಿದ್ದು ಹಳ್ಳ ಒತ್ತುವರಿ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು ತೊಡಕಾಗಿದೆ.ಬಳಿಕ ಸರ್ವೇ ಕಾರ್ಯ ನಡೆಸಿ ಒತ್ತುವರಿ ಇದ್ದರೇ ತೆರವುಗೊಳಿಸಿ, ನೀರು ಸರಾಗವಾಗಿ ಹಳ್ಳಧಲ್ಲಿ ಹರಿಸಲಾಗುವುದು. ಹಳ್ಳದಲ್ಲಿರುವ ಸೇತುವೆ ಎತ್ತರಿಸಿ ಸಮಸ್ಯೆಯ ಶಾಶ್ವತ ಪರಿಹಾರ ದೊರಕಿಸಲಾಗುವುದು ಎಂದರು.