ತುಮಕೂರು : ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕಗಳಾಗಿರುವ ಪೌರಾಣಿಕ ನಾಟಕಗಳು ಇಂದು ಉಳಿದಿದ್ದರೆ ಅದು ಹವ್ಯಾಸಿ ಕಲಾವಿದರಿಂದ ಮಾತ್ರ ಎಂದು ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶ್ರೀಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿ ಗೂಳೂರು ಹಾಗೂ ಹಿರಿಯ ಕಲಾವಿದ ಜಿ.ಕೆ.ರಂಗಸ್ವಾಮಯ್ಯ ಅವರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಹಾಗೂ ಜಿ.ಕೆ.ರಂಗಸ್ವಾಮಯ್ಯನವರಿಗೆ ರಜತ ಕಿರೀಟಧಾರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು,ಹವ್ಯಾಸಿ ಕಲಾವಿದರು ತಮ್ಮ ಮನೆಯಲ್ಲಿ ಏನೇ ಕಷ್ಟಗಳಿದ್ದರೂ ಅವುಗಳೆನ್ನಲಾ ಬದಿಗೊತ್ತಿ,ಕನಿಷ್ಠ ವರ್ಷಕ್ಕೆ ಒಂದು ನಾಟಕವನ್ನಾದರೂ ಕಲಿತು,ಪ್ರೇಕ್ಷಕರ ಮುಂದೆ ಪ್ರದರ್ಶಿಸುವ ಮೂಲಕ ಪೌರಾಣಿಕ ನಾಟಕಗಳು ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ.ವೃತ್ತಿ ಕಂಪನಿಗಳು ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ಹವ್ಯಾಸಿ ಕಲಾವಿದರು ಉತ್ತಮ ನೀತಿ ಮತ್ತು ಸಂದೇಶವನ್ನು ಹೊಂದಿರುವ ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶಿಸುತ್ತಿರುವುದು ಕಲಾವಿದರ ತವರೂರಾದ ತುಮಕೂರು ಜಿಲ್ಲೆಯ ಎಲ್ಲಾ ಕಲಾವಿದರು ಹೆಮ್ಮೆ ಪಡುವ ವಿಚಾರ ಎಂದರು.
ಕಲಾವಿದರಿಗೆ ಪ್ರವೃತ್ತಿ ಮತ್ಸರವಿಲ್ಲ.ಉತ್ತಮ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಂಬಲಿಸುತ್ತಾರೆ ಎಂಬುದಕ್ಕೆ ಇಂದು ಹಿರಿಯ ಕಲಾವಿದರಾದ ಜಿ.ಕೆ.ರಂಗಸ್ವಾಮಯ್ಯ ಅವರನ್ನು ಅಭಿನಂದಿಸಲು ಇಷ್ಟೊಂದು ಜನರು ಸೇರಿರುವುದೇ ಸಾಕ್ಷಿಯಾಗಿದೆ. ಶನಿವಾರ, ಭಾನುವಾರು ಕಲಾವಿದರು ಮತ್ತು ಕಲಾ ಆಸ್ವಾದಕರನ್ನು ಹೊರತು ಪಡಿಸಿ, ಉಳಿದವರು ಈ ಕಲಾಕ್ಷೇತ್ರದೊಳಗೆ ಬರಲು ಸಾಧ್ಯವಾಗುವುದಿಲ್ಲ.ಬೆಂಗಳೂರು ಹೇಗೆ ಐಟಿ, ಬಿಟಿ ಹಬ್ ಆಗಿದೆಯೋಮ ಹಾಗೇ, ತುಮಕೂರು ಪೌರಾಣಿಕ ನಾಟಕಗಳ ಹಬ್ ಆಗಿ ಬೆಳೆಯುತ್ತಿದೆ. ಇದನ್ನು ಮತ್ತಷ್ಟು ಉನ್ನತಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಯುವ ಕಲಾವಿದರ ಮೇಲಿದೆ ಎಂದು ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ನುಡಿದರು.
ರಂಗಭೂಮಿಯ ಆಸ್ಕರ್ ಎನ್ನಬಹುದಾದ ರಜತಕಿರೀಟಧಾರಣೆ ಗೌರವಕ್ಕೆ ಪಾತ್ರರಾದ ಜಿ.ಕೆ.ರಂಗಸ್ವಾಮಯ್ಯ ಮಾತನಾಡಿ,ನಾನು 14ನೇ ವಯಸ್ಸಿನಲ್ಲಿಯೇ ನಾಟಕಗಳಿಗೆ ಬಣ್ಣ ಹಚ್ಚಲು ಆರಂಭಿಸಿದೆ.ದಿನಕ್ಕೆ ಒಂದುವರೆ ರೂಪಾಯಿ ಕೂಲಿ ದೊರೆಯುತಿದ್ದ ಸಂದರ್ಭದಲ್ಲಿಯೂ ಒಂದಿಷ್ಟು ಹಣ ಕೂಡಿಹಾಕಿ,ನಾಟಕಗಳನ್ನು ಆಡಲು ಖರ್ಚು ಮಾಡುತ್ತಿದೆ. ಇಂದು ನೂರಾರು ಜನ ಹಿರಿಯ ಕಲಾವಿದರು ಬಂಧು ಆಶೀರ್ವದಿಸಿದ್ದೀರಿ,ಇದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ಎಂದರು.
ಕಲಾಶ್ರೀ ಡಾ.ಲಕ್ಷö್ಮಣದಾಸ್ ಮಾತನಾಡಿ, ರಂಗಭೂಮಿಗೆ ನಿಜವಾದ ವಾರಸುದಾರರೇ ಹವ್ಯಾಸಿ ಕಲಾವಿದರು.ತಮ್ಮ ಕಷ್ಟಗಳನ್ನು ಮರೆಯಲು ನಾಟಕಗಳನ್ನು ಕಲಿತು ಪ್ರದರ್ಶನ ನೀಡುವಂತಹ ಔದಾರ್ಯ ಅವರದ್ದು, ಜಿ.ಕೆ.ರಂಗಸ್ವಾಮಯ್ಯ ಅವರು ತಮ್ಮ ಜೀವನವನ್ನೇ ಪೌರಾಣಿಕ ನಾಟಕಗಳಿಗೆ ಮುಡಿಪಾಗಿಟ್ಟಿದ್ದಾರೆ.ಅವರು ಮಾಡದ ಪಾತ್ರಗಳಿಲ್ಲ.ಅಂತಹ ಕಲಾವಿದರನ್ನು ಗೌರವಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದರು.
ವೇದಿಕೆಯಲ್ಲಿ ಜೆಡಿಎಸ್ ಮುಖಂಡ ಪಾಲನೇತ್ರಯ್ಯ,ಯೋಗಾನಂದಕುಮಾರ್, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಜಿ.ಕೆ.ಶಿವಣ್ಣ, ಮಾಜಿ ಅಧ್ಯಕ್ಷ ಶಿವಮಹದೇವಯ್ಯ,ಕಲಾವಿದರಾದ ಎಸ್.ರಾಜಣ್ಣ,ನಂಜಪ್ಪಶೆಟ್ಟಿ,ಎಂ.ವಿ.ನಾಗಣ್ಣ, ಇರಕಸಂದ್ರ ಜಗನ್ನಾಥ್, ನಂಜಪ್ಪ, ಯೋಗಾನಂದಕುಮಾರ್,ರಾಜಣ್ಣ, ಸಿ.ಜಯಣ್ಣ,ಟಿ.ಹೆಚ್.ಜಯರಾಮ್, ಮಾಜಿ ಪ್ರಾಂಶುಪಾಲರಾದ ರಾಜಣ್ಣ, ಸೌಭಾಗ್ಯಮ್ಮ, ಪುಟ್ಟತಾಯಮ್ಮ, ನಾಗರತ್ನ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಪಾಲ್ಗೊಂಡಿದ್ದರು.
ಇದೇ ವೇಳೆ ಜಿ.ಕೆ.ರಂಗಸ್ವಾಮಯ್ಯ ಅವರಿಗೆ ರಜತಕಿರೀಟ ಧಾರಣೆ ಮಾಡಿ ಅಭಿನಂದಿಸಲಾಯಿತು.