ಹಿಂದುಳಿದವರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ : ರಾಜ್ಯದಲ್ಲಿ ಹಿಂದುಳಿದ ವರ್ಗದ ಸಮುದಾಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಸುಧಾರಣೆಯಾಗಿದ್ದರೆ ಅದು ಡಿ.ದೇವರಾಜ ಅರಸು ಅವರ ಕೊಡುಗೆ. ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಹಗಲಿರುಳು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಹಿಂದುಳಿದ ವರ್ಗದವರನ್ನು, ದೀನದಲಿತರನ್ನು, ಅಲ್ಪಸಂಖ್ಯಾತರನ್ನು ಸೇರಿದಂತೆ ಎಲ್ಲಾ ವರ್ಗದವರನ್ನು ಅತ್ಯಂತ ಕಾಳಜಿ, ದೂರದೃಷ್ಟಿಕೋನ ಇಟ್ಟುಕೊಂಡು ಆಡಳಿತ ಮಾಡಿ ಅನೇಕ ಸುಧಾರಣೆಗಳನ್ನು ತಂದವರು ದಿವಂಗತ ಡಿ.ದೇವರಾಜ ಅರಸು ಅವರು. ಹಿಂದುಳಿದವರನ್ನು ಸಮಾಜದಲ್ಲಿ ಮುಂಚೂಣಿಗೆ ತರಲು ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಉಳುವವನೆ ಭೂಮಿಯ ಒಡೆಯ ಯೋಜನೆ ಮಾದರಿ ಯೋಜನೆಯಾಗಿ ಜನಮಾನಸದಲ್ಲಿ ಉಳಿದಿದೆ. ಕರ್ನಾಟಕದ ಇತಿಹಾಸದಲ್ಲೇ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಡಿ.ದೇವರಾಜ ಅರಸು. ನಮ್ಮ ಬೆಳವಣಿಗೆಯನ್ನು ಮೀರಿ ಸಮಾಜದ ಬೆಳೆವಣಿಯಲ್ಲಿ ಆತ್ಮತೃಪ್ತಿ ಕಾಣಬೇಕು. ವೈಯಕ್ತಿಕ ಸಾಧನೆಗಳಿಗಿಂದ ಸಮಾಜದ ಮೌಲ್ಯಗಳು ಉಳಿಯಬೇಕೆಂಬುದು ಅವರ ಆಶಯವಾಗಿತ್ತು ಎಂದರು.
ಈ ಸಂದರ್ಭದಲ್ಲಿ ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಧುಗಿರಿ ವಿಭಾಗದ ಉಸ್ತುವಾರಿ ವಿಕಾಸ್ ಪುತ್ತೂರ್, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಮಹಿಳಾ ಘಟಕದ ನಗರ ಕಾರ್ಯದರ್ಶಿ ಲತಾ ಕೃಷ್ಣ, ಮುಖಂಡರಾದ ಮುದಿಮಡು ಮಂಜುನಾಥ್, ಸತೀಶ್.ಡಿ, ಮೂಗನಹಳ್ಳಿ ರಾಮು ಸೇರಿದಂತೆ ಹಲವರು ಹಾಜರಿದ್ದರು.